ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು, ಉಗ್ರ ಚಟುವಟಿಕೆಗಳಿಗಾಗಿ ನಗರ-ಗ್ರಾಮೀಣ ಭಾಗದಲ್ಲಿ ಡಕಾಯಿತಿ ನಡೆಸುತ್ತಿದ್ದ ನಾಲ್ವರು ಜೆಎಂಬಿ ಉಗ್ರರಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿದೆ.
ಪಶ್ಚಿಮ ಬಂಗಾಲದ ಕಡೋರ್ ಖಾಜಿ, ಮುಸ್ತಾಫಿರ್ ರೆಹಮಾನ್, ಆದಿಲ್ ಶೇಕ್, ಅಬ್ದುಲ್ ಕರೀಂ ಶಿಕ್ಷೆಗೊಳಗಾದವರು. 2019ರಲ್ಲಿ ಇವರು ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಡಕಾಯಿತಿ ಮಾಡುತ್ತಿದ್ದರು. ಕೆ.ಆರ್. ಪುರಂ, ಕೊತ್ತನೂರು, ಅತ್ತಿಬೆಲೆ ಯಲ್ಲೂ ಪ್ರಕರಣಗಳಿದ್ದವು. ಎನ್‌ಐಎ ಅಧಿ ಕಾರಿಗಳು ರಾಮನಗರ ಹಾಗೂ ಇತರೆಡೆ ಅಡಗಿದ್ದ 11 ಮಂದಿಯನ್ನು ಬಂಧಿಸಿ ಸುಧಾರಿತ ಸ್ಫೋಟಕ ತಯಾರಿಕೆಗೆ ಎಲೆಕ್ಟ್ರಾನಿಕ್ ವಸ್ತುಗಳು, ಉಪಕರಣ ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದರು.
ವಿಚಾರಣೆ ವೇಳೆ ಉಗ್ರ ಚಟುವಟಿಕೆ, ಸ್ಫೋಟಕಗಳನ್ನು ಸಂಗ್ರಹಿಸಿಟ್ಟ ಹಾಗೂ ವಿಧ್ವಂಸಕ ಕೃತ್ಯಕ್ಕೆ ಕೃಷ್ಣಗಿರಿ ಬೆಟ್ಟದಲ್ಲಿ ರಾಕೆಟ್ ಲಾಂಚರ್‌ಗಳ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಿದ್ದರು ಎನ್ನಲಾಗಿತ್ತು. ಡಕಾಯಿತಿ ಮಾಡಿದ ಹಣವನ್ನು ಜೆಎಂಬಿ ಸಂಘಟನೆಯ ಖಾತೆಗೆ ಜಮೆ ಮಾಡುತ್ತಿದ್ದರು. ಎಲ್ಲ 11 ಶಂಕಿತರ ವಿರುದ್ಧ ತನಿಖೆ ನಡೆಸಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. ಕೋರ್ಟ್ ನಾಲ್ವರಿಗೆ 7 ವರ್ಷ ಕಠಿನ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ. ಈ ಹಿಂದೆ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.