ಪುಣೆ: ಸಿಇಒ ಅಡಾರ್ ಪೂನಾವಾಲ ಅವರ ಹೆಸರಿನಲ್ಲಿ ಅವರದ್ದೇ ಕಂಪನಿಗೆ 1.01 ಕೋಟಿ ರೂ. ವಂಚನೆ ಮಾಡಿರುವ ಅಚ್ಚರಿಯ ಘಟನೆಯೊಂದು ನಡೆದಿದೆ. ಪ್ರಕರಣ ಸಂಬಂಧ ಪುಣೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ಕೊವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಸೀರಂ ಇನ್ಸ್ಟಿಟ್ಯೂಟ್ನ ನಿರ್ದೇಶಕ ಸತೀಶ್ ದೇಶಪಾಂಡೆ ಅವರಿಗೆ ಇತ್ತೀಚೆಗೆ ವಾಟ್ಸ್ಆ್ಯಪ್ ಸಂದೇಶವೊಂದು ಬಂದಿತ್ತು. ಸಂದೇಶ ಕಳುಹಿಸಿದ ವ್ಯಕ್ತಿಯು ತನ್ನನ್ನು ತಾನು ಸೀರಂ ಕಂಪನಿಯ ಸಿಇಒ ಅಡಾರ್ ಪೂನಾವಾಲ ಎಂದು ಹೇಳಿಕೊಂಡಿದ್ದು, ನಾನು ಸೂಚಿಸುವ 7 ಬೇರೆ ಬೇರೆ ಖಾತೆಗಳಿಗೆ 1.01 ಕೋಟಿ ರೂ.ಗಳನ್ನು ಕಳುಹಿಸುವಂತೆ ಹೇಳಿದ್ದ.
ಇದು ಪೂನಾವಾಲ ಅವರಿಂದಲೇ ಬಂದ ಸಂದೇಶವಿರಬಹುದೆಂದು ಭಾವಿಸಿದ ದೇಶಪಾಂಡೆ ಅವರು, ಎಲ್ಲ ಖಾತೆಗಳಿಗೂ ಹಣ ಹಾಕಿದ್ದರು. ಕೆಲ ದಿನಗಳ ಬಳಿಕ ತಾವು ಮೋಸ ಹೋಗಿದ್ದು ತಿಳಿದುಬಂದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ದೇಶದ ವಿವಿಧ ಮೂಲೆಗಳಲ್ಲಿ ಖಾತೆಗಳನ್ನು ಹೊಂದಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಆ ಖಾತೆಗಳಿಂದ 13 ಲಕ್ಷ ರೂ. ಜಪ್ತಿ ಮಾಡಲಾಗಿದೆ.