Advertisement

ನಾಲ್ಕು ಚಿನ್ನದ ಪದಕ- ಶೈಕ್ಷಣಿಕ ಸಾಧನೆಗೆ ಆರ್ಥಿಕ ಸಮಸ್ಯೆ ತೊಡಕಲ್ಲ: ಆರತಿ

11:12 AM Mar 12, 2024 | Team Udayavani |

ಉದಯವಾಣಿ ಸಮಾಚಾರ
ವಿಜಯಪುರ: ಕಲಿಯುವ ಛಲ ಇದ್ದಲ್ಲಿ ಆರ್ಥಿಕ ಸಂಕಷ್ಟ ಎಂಬುದು ಶೈಕ್ಷಣಿಕ ಸಾಧನೆಗೆ ಎಂದೂ ತೊಡಕಲ್ಲ. ಸ್ವಯಂ ನಾನೇ ಆರ್ಥಿಕ ದುರ್ಬಲ ಕುಟುಂಬದ ಹಿನ್ನೆಲೆಯಿಂದ ಬಂದರೂ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಾಲ್ಕು ಚಿನ್ನದ ಪದಕ ಪಡೆದಿರುವುದು ಸಾಕ್ಷಿ.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 4 ಚಿನ್ನದ ಪದಕಗಳು ಹಾಗೂ ಎರಡು ನಗದು ಪುರಸ್ಕಾರ ಸಹಿತ ಕನ್ನಡ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಪಡೆದಿರುವ ಆರತಿ ಸವ್ವಾಸೆ ಮಾತು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಹಿಮತ್ತೂರು ಎಂಬ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಆರತಿ, ನಾನೇನು
ಆರ್ಥಿಕವಾಗಿ ಸದೃಢ ಕುಟುಂಬದ ಹಿನ್ನೆಲೆಯಿಂದ ಬಂದವಳಲ್ಲ. ನನ್ನಪ್ಪ ಲಕ್ಷ್ಮಣ, ತಾಯಿ ಕುಲಬಾಯಿ ಇಬ್ಬರೂ ಅಕ್ಷರ
ಬಲ್ಲವರಲ್ಲ. ಕೇವಲ 6 ಎಕರೆ ಜಮೀನಿದ್ದು ಕಬ್ಬು ಬೆಳೆಯುತ್ತೇವೆ. ಇರುವ ಜಮೀನಿನಲ್ಲೇ ನಾನು ಸೇರಿದಂತೆ ಮೂವರು ಮಕ್ಕಳನ್ನು ಓದಿಸಿದ್ದಾರೆ.

ಓದುವ ಹಂಬಲ ಇದ್ದ ನಾನು ಬಡತನವನ್ನು ಲೆಕ್ಕಿಸದೇ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಇದ್ದುಕೊಂಡು, ಬದ್ಧತೆ ಹಾಗೂ
ಶ್ರದ್ಧೆಯಿಂದ ಓದಿಯೇ ಸಾಧನೆ ಮಾಡಿದ್ದೇನೆ. ನಮ್ಮ ಭಾಗದಲ್ಲೇ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಆಗಿರುವ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇರುವುದರಿಂದ ಹೆಚ್ಚು ಸಹಕಾರಿ ಆಗಿದೆ ಎನ್ನುತ್ತಾಳೆ.

ಗ್ರಾಮೀಣ ಭಾಗದಿಂದ ಬರುವವರಿಗೆ, ಅದರಲ್ಲೂ ಮಹಿಳೆಯರಿಗೆ ಸಮಸ್ಯೆ ಇರುವುದು ನಿಜವೇ ಆದರೂ ಅವುಗಳನ್ನು ಮೆಟ್ಟಿ ನಿಂತಾಗಲೇ ನಮ್ಮ ಸಾಧನೆಗೂ ಅರ್ಥ ಬರುತ್ತದೆ ಎನ್ನುವ ಆರತಿ, ಕನ್ನಡ ನೆಲದಲ್ಲಿ ಕನ್ನಡ ಉಳಿಸುವುದು ಇಂದಿನ ಸವಾಲಾಗಿರುವ ಕಾರಣ ಕನ್ನಡ ನನ್ನ ಅಯ್ಕೆಯಾಗಿತ್ತು ಎನ್ನುತ್ತಾಳೆ.

Advertisement

ಪಿಎಚ್‌ಡಿ ಸಂಶೋಧನೆ ನಡೆಸಿ ಕನ್ನಡ ಕಟ್ಟುವ ಕೆಲಸ ಮಾಡುವ ಉಪನ್ಯಾಸಕಿ ಆಗಬೇಕು. ಅಕ್ಷರ ಲೋಕದ ಪರಿವೆ ಇಲ್ಲದ ಹೆತ್ತವರ ಆಸೆ, ಆಕಾಂಕ್ಷೆಗಳಿಗೆ ಮನ್ನಣೆ ನೀಡಬೇಕು ಎಂಬುದು ನನ್ನ ಮುಂದಿರುವ ಗುರಿ ಎಂದು ಮನದಾಳ ತೆರೆದಿಟ್ಟಿದ್ದಾಳೆ.

*ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next