Advertisement

ನಾಲ್ವರು ಸಾಧಕರಿಗೆ: ಮಣಿಪಾಲದ ಸಂಸ್ಥೆಗಳಿಂದ ಹೊಸ ವರ್ಷದ ಪುರಸ್ಕಾರ

01:33 AM Jan 14, 2023 | Team Udayavani |

ಮಣಿಪಾಲ: ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಮಾಹೆ, ಎಂಇಎಂಜಿ., ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ಮತ್ತು ಡಾ| ಟಿ.ಎಂ.ಎ. ಪೈ ಫೌಂಡೇಶನ್‌ – ಈ ಸಂಸ್ಥೆಗಳು ಜತೆಗೂಡಿ ಹೊಸ ವರ್ಷ 2023ರ ಪ್ರಶಸ್ತಿಯನ್ನು ನಾಲ್ವರು ಮಹಾಸಾಧಕರಿಗೆ ನೀಡಿ ಗೌರವಿಸಲಿವೆ. ಬ್ಯಾಂಕಿಂಗ್‌ ಕ್ಷೇತ್ರದ ಮಾಂತ್ರಿಕ ಎಂ.ಎಸ್‌. ಮಹಾಬಲೇಶ್ವರ, ಖ್ಯಾತ ಅಸ್ಥಿ ಶಸ್ತ್ರಚಿಕಿತ್ಸಾ ತxಜ್ಞ ಡಾ| ಪಿ. ಶ್ರೀಪತಿ ರಾವ್‌, ಶಿಶು ಚಿಕಿತ್ಸಾ ವಿಷಯದ ಹಿರಿಯ ಪ್ರಾಧ್ಯಾಪಿಕೆ ಡಾ| ಪುಷ್ಪಾ ಜಿ. ಕಿಣಿ, ಛಲದ ಬದುಕಿನ ಹಳ್ಳಿಯ ಭಗೀರಥ ಅಮೈ ಮಹಾಲಿಂಗ ನಾಯ್ಕ ಅವರನ್ನು ಜ. 14ರ ಸಂಜೆ 5.30ಕ್ಕೆ ಮಣಿಪಾಲದ ಹೊಟೇಲ್‌ ವ್ಯಾಲಿ ವ್ಯೂ ಸಭಾಂಗಣದಲ್ಲಿ ಹೊಸ ವರ್ಷದ ಪ್ರಶಸ್ತಿ ನೀಡಿ
ಗೌರವಿಸಲಾಗುತ್ತದೆ.

Advertisement

ಸಾಧಕರ ಕಿರು ಪರಿಚಯ ಹೀಗಿದೆ

ಎಂ.ಎಸ್‌. ಮಹಾಬಲೇಶ್ವರ



ಖಾಸಗಿ ಕ್ಷೇತ್ರದ ಕರ್ಣಾಟಕ ಬ್ಯಾಂಕ್‌ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮೀರಿಸಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಗೊಂಡು ದೇಶಾದ್ಯಂತ ಶಾಖೆಗಳನ್ನು ಹೊಂದಿ ಮುಂಚೂಣಿಯಲ್ಲಿರುವುದಕ್ಕೆ ಕಾರಣ ಕೆಲವು ತಲೆಮಾರುಗಳಿಗೆ ಸೇರಿದ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ನಿಷ್ಠಾಧಿಕಾರಿ ವರ್ಗ, ಸಮರ್ಥ ಸಿಬಂದಿ ವರ್ಗ. ಸ್ಥಾಪಕ ಅಧ್ಯಕ್ಷರಾಗಿ ಕೆ. ಸೂರ್ಯನಾರಾಯಣ ಅಡಿಗ ಬ್ಯಾಂಕನ್ನು ಮುನ್ನಡೆಸಿದರು. ಪ್ರಸ್ತುತ ಬ್ಯಾಂಕಿನ ಆಡ ಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಅವರು. ಕೃಷಿಯಲ್ಲಿ ಆಸಕ್ತರಾದ ಮಹಾಬಲೇಶ್ವರ ಅವರು ಬೆಂಗಳೂರಿನ ಕೃಷಿ ವಿ.ವಿ.ಯಲ್ಲಿ ಪದವಿ ಪಡೆದು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. 2017ರಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದರು. ಅವರ ನಾಯಕತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಶೀಘ್ರಗತಿಯಲ್ಲಿ ಸಾಗುತ್ತಿದೆ. ಕೆಬಿಎಲ್‌ ವಿಕಾಸ್‌, ಡಿಜಿಟಲ್‌ ಬ್ಯಾಂಕಿಂಗ್‌, ಕೃಷಿ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿರುವ ಬ್ಯಾಂಕ್‌ ತನ್ನ ಗ್ರಾಹಕರು, ಠೇವಣಿದಾರರು, ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು, ಕೃಷಿಕರು, ಸ್ವಂತ ಉದ್ಯೋಗಿ ಮಹಿಳೆಯರು, ಹೂಡಿಕೆದಾರರು, ಕಿರು ಉದ್ಯಮಿಗಳು, ಸಾಮಾನ್ಯ ವರ್ಗದ ವರ್ತಕರು-ಮುಂತಾದವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾಯಕದಲ್ಲಿ ನಿರತವಾಗಿವೆ. ಅನತಿ ದೂರದಲ್ಲಿ ಶತಮಾನದ ಯಶಸ್ಸನ್ನು ಉತ್ಸವ ಸ್ವರೂಪದಲ್ಲಿ ಆಚರಿಸಲಿರುವ ಬ್ಯಾಂಕಿನ ರಥಿಕ ಎಂ.ಎಸ್‌. ಮಹಾಬಲೇಶ್ವರ.

ಅಸ್ಥಿ ಶಸ್ತ್ರ ಚಿಕಿತ್ಸಾ ಪ್ರವೀಣ ಡಾ| ಪಿ. ಶ್ರೀಪತಿ ರಾವ್‌



ಡಾ| ಪಾಂಗಾಳ ಶ್ರೀಪತಿ ರಾವ್‌ 1953ರಲ್ಲಿ ಮಂಗಳೂರಲ್ಲಿ ಜನಿಸಿದರು. ಅವರ ತಂದೆ ಪ್ರೊ| ಸೇತು ಮಾಧವ ರಾವ್‌ ಮಂಗಳೂರು ಸರಕಾರಿ ಕಾಲೇಜಿನಲ್ಲಿ, ಬಳಿಕ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಶ್ರೀಪತಿ ರಾವ್‌ ಅವರು ಎಂಬಿಬಿಎಸ್‌ ಶಿಕ್ಷಣವನ್ನು ಬೆಂಗಳೂರಿನ ಸೇಂಟ್‌ ಜಾನ್‌ ಮೆಡಿಕಲ್‌ ಕಾಲೇಜಿನಲ್ಲಿ ಪಡೆದರು. ಮಣಿಪಾಲದ ಕೆಎಂಸಿಯಿಂದ 1978ರಲ್ಲಿ ಡಿ ಆರ್ಥೋ, 1981ರಲ್ಲಿ ಎಂಎಸ್‌ ಸ್ನಾತಕೋತ್ತರ ಪದವಿ ಪಡೆದರು. 1981 ರಲ್ಲಿ ಅಧ್ಯಾಪಕರಾಗಿ ಸೇರಿದ ಡಾ| ರಾವ್‌ 1996 -2001 ಅವಧಿಯಲ್ಲಿ ವಿಭಾಗದ ಮುಖ್ಯಸ್ಥರಾಗಿದ್ದರು.

ಆರ್ಥೋಸ್ಕೊಪಿಕ್‌ ಶಸ್ತ್ರಕ್ರಿಯೆಯಲ್ಲಿ ತಜ್ಞರಾದ ಮೊದಲಿಗರಲ್ಲಿ ಡಾ| ಶ್ರೀಪತಿ ರಾವ್‌ ಒಬ್ಬರು. 2007-2009ರ ಅವಧಿಯಲ್ಲಿ ಭಾರತದ ಆರ್ಥೋಸ್ಕೋಪಿಕ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಹಿರಿಮೆ ಡಾ| ರಾವ್‌ ಅವರದು. ಆಸ್ಟ್ರೇಲಿಯಾ, ಇರಾನ್‌ ಇಂಗ್ಲೆಂಡ್‌ನ‌ಲ್ಲಿ ಶಸ್ತ್ರಚಿಕಿತ್ಸೆ ನಡೆಸಿದವರು. 2010ರಲ್ಲಿ ಅವರಿಗೆ ಎಫ್ಆರ್‌ಸಿಎಸ್‌ ಪದವಿ ದೊರಕಿತು. ಕೆಎಂಸಿ ಡೀನ್‌ ಆಗಿಯೂ ಡಾ| ಶ್ರೀಪತಿ ರಾವ್‌ ಹೊಣೆಗಾರಿಕೆ ವಹಿಸಿದ್ದರು. ಪತ್ನಿ ಡಾ| ಸುಗಂಧಿ ರಾವ್‌ ಮೈಕ್ರೋ ಬಯಾಲಜಿ ವಿಭಾಗದಲ್ಲಿ ಮುಖ್ಯಸ್ಥೆಯಾಗಿದ್ದರು. ತಮ್ಮ 60ನೇ ವರ್ಷದ ಬಳಿಕ ಕೆಲಕಾಲ ದುಬಾೖಯಲ್ಲಿ ಮೆಡ್‌ ಕೇರ್‌ ಅರ್ಥೋಪೆಡಿಕ್ಸ್ ಮತ್ತು ಸ್ಪಯಿನ್‌ ಆಸ್ಪತ್ರೆಯಲ್ಲಿ ಅವರು ಸಲಹಾ ತಜ್ಞ ಅಸ್ಥಿ ಶಸ್ತ್ರ ಚಿಕಿತ್ಸಕರಾಗಿದ್ದರು.

Advertisement

ಶಿಶು ಚಿಕಿತ್ಸಾ ತಜ್ಞೆ, ಪ್ರಾಧ್ಯಾಪಿಕೆ
ಡಾ| ಪುಷ್ಪಾ ಕಿಣಿ

ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾಭ್ಯಾಸವನ್ನು ಕೆನರಾ ಸಮೂಹ ಸಂಸ್ಥೆಗಳಲ್ಲಿ ಪಡೆದ ಪುಷ್ಪಾ ಕಿಣಿ ಪಿಯುಸಿ ವಿದ್ಯಾಭ್ಯಾಸವನ್ನು ಸೈಂಟ್‌ ಆ್ಯಗ್ನೆಸ್‌ ಕಾಲೇಜಿನಲ್ಲಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಕಾಲದಲ್ಲಿ ಬ್ಯಾಡ್ಮಿಂಟನ್‌, ಎನ್ನೆಸೆಸ್‌ ಮುಂತಾದ ಪಠ್ಯೇತರ ವಿಷಯಗಳಲ್ಲೂ ಆಸಕ್ತರಾಗಿದ್ದರು. ಎಂಬಿಬಿಎಸ್‌ ಮುಗಿಸಿದ ಕಾಲಕ್ಕೆ ಕಾಲೇಜಿನ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿನಿಯಾಗಿದ್ದರು. ಅವರಿಗೆ 1982ರಲ್ಲಿ ಸಿಎಸ್‌ಐಆರ್‌ನಿಂದ ಪ್ರತಿಷ್ಠಿತ ಸಂಶೋಧನಾ ಫೆಲೋಶಿಪ್‌, 1984ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಿಸಿಎಚ್‌ ಪದವಿ ದೊರಕಿದುವು. 1986ರಿಂದ ನಿವೃತ್ತಿಯವರೆಗೂ ಮಣಿಪಾಲದ ಕೆಎಂಸಿಯ ಚಿಕಿತ್ಸಾ ವಿಭಾಗದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಲ್ಲಿ ನಿಯುಕ್ತಿಯಾಗಿದ್ದರು. 1996, 2012, 2015, 2018- ಹೀಗೆ ಹಲವಾರು ಬಾರಿ ಶ್ರೇಷ್ಠ ಶಿಶು ಚಿಕಿತ್ಸಾ ಪ್ರಾಧ್ಯಾಪಿಕೆಯಾಗಿ ಗುರುತಿಸಲ್ಪಟ್ಟಿದ್ದರು. ರಾಷ್ಟ್ರೀಯ ವೈದ್ಯಕೀಯ ಸಮಿತಿಯ ಶಾಶ್ವತ ಸದಸ್ಯೆಯಾಗಿದ್ದ ಅವರು, ಟೀಂ ಎನ್‌ಎಚ್‌ಎ ಇಂಡಿಯಾ ಮತ್ತು ಐಸಿಎಮ್ ಆರ್‌ ಆಯುಷ್ಮಾನ್‌ ಭಾರತ ಯೋಜನೆಯ ಸಮಿತಿಗಳ ಸದಸ್ಯೆಯೂ ಆಗಿದ್ದರು.

ಅಮೈ ಮಹಾಲಿಂಗ ನಾಯ್ಕ



ಅಮೈ ಮಹಾಲಿಂಗ ನಾಯ್ಕ ತನ್ನ ಬದುಕನ್ನೇ ತಾನೇ ರೂಪಿಸಿಕೊಂಡದ್ದು ಒಂದು ಐತಿಹಾಸಿಕ ವಿದ್ಯಮಾನ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ಸುಮಾರು ಏಳು ದಶಕಗಳ ಹಿಂದೆ ಹಿಂದುಳಿದ ಗುಡ್ಡಗಾಡು ಪ್ರದೇಶದಲ್ಲಿ ಜನ್ಮ ತಾಳಿದರು. ಕೇಪು ಗ್ರಾಮದ ಅಮೈ ಹುಟ್ಟೂರು. ಶಾಲೆಗೆ ಹೋದವರಲ್ಲ. ಅಮೈ ವೆಂಕಪ್ಪ ನಾಯ್ಕ ಮತ್ತು ಅಕ್ಕು ಮಹಾಲಿಂಗ ಹೆತ್ತವರು. ತಮ್ಮದೇ ಆದ ಜಮೀನು ಇಲ್ಲ; ಸೂರು ಇಲ್ಲ. ಯೌವನಕ್ಕೆ ಕಾಲಿಟ್ಟಾಗ ತಂದೆಯ ಮರಣದಿಂದ ಮಹಾಲಿಂಗ ಅನಾಥರಾದರು. ದರ್ಖಾಸ್ತಾಗಿ ಸಿಕ್ಕಿದ ಶುಷ್ಕ ಜಮೀನಿನಲ್ಲಿ ನೀರನ್ನು ಪಡೆಯುವ ಒಂದೇ ಮಾರ್ಗವೆಂದರೆ ಗುಡ್ಡದಲ್ಲಿ ಸುರಂಗ ತೋಡುವುದು. ತನ್ನ ಗುಡ್ಡದಲ್ಲಿ ನೀರಿನ ಸೆಲೆ ಇರಬಹುದು ಎಂಬ ಆಸೆಯಿಂದ ಆರೇಳು ವರ್ಷಗಳ ಕಾಲ ಒಂದು ವ್ಯರ್ಥ ಪ್ರಯತ್ನದಿಂದ ಇನ್ನೊಂದು ವ್ಯರ್ಥ ಪ್ರಯತ್ನಕ್ಕೆ ಜಿಗಿದು ನಿರಾಸೆಯನ್ನೇ ಪ್ರತಿಫ‌ಲವಾಗಿ ಪಡೆದರು.

ಆತ್ಮಸ್ಥೈರ್ಯ, ಛಲ, ನಂಬಿಕೆ ಕೊನೆಗೂ ಅವರಿಗೆ ಯಶಸ್ಸನ್ನು ತಂದುವು. ಏಳನೆಯ ಸುರಂಗ ಯಶಸ್ವಿಯಾಗಿ ಗಂಗೆ ಧಾರೆಯಾಗಿ ಹರಿದು ಬಂದಳು. ಇಬ್ಬರು ಗಂಡು ಮಕ್ಕಳಿಗೂ ಒಬ್ಟಾಕೆ ಹೆಣ್ಣು ಮಗಳಿಗೂ ಸ್ವತಂತ್ರ ಬದುಕನ್ನು ನೀಡಿದವರು ಅವರು.

Advertisement

Udayavani is now on Telegram. Click here to join our channel and stay updated with the latest news.

Next