Advertisement
ಮಲವಗೊಪ್ಪದಲ್ಲಿ ಅನುಮಾನಾಸ್ಪದವಾಗಿ ಕಾರಿನಲ್ಲಿ ಓಡಾಡುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ತಿರುಪತಿ ಹಳ್ಳಿಯ ಜನಾರ್ಧನ ಎಂಬುವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಿವಿಧ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಆರೋಪಿಯು ತುಂಗಾ ನಗರ ಠಾಣೆಯ 2, ವಿನೋಬನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯ ತಲಾ ಒಂದು ಪ್ರಕರಣ ನಡೆಸಿರುವುದಾಗಿ ತನಿಖೆ ವೇಳೆಒಪ್ಪಿಕೊಂಡಿದ್ದಾನೆ ಎಂದರು.
ಕೂಲಂಕಶವಾಗಿ ವಿಚಾರಣೆ ನಡೆಸಿ 21 ಲಕ್ಷ ರೂ. ಬೆಲೆಯ 810 ಗ್ರಾಂ. ಚಿನ್ನಾಭರಣ, 3 ಲಕ್ಷ ರೂ. ಮೌಲ್ಯದ ಒಂದು ಷವರ್ಲೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹಾಸನ ಗೋಲ್ಡ್ ಕಂಪೆನಿಗೆ ಮಾರಾಟ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವುದು ಬಾಕಿ ಇದೆ ಎಂದು ತಿಳಿಸಿದರು. ಅದೇ ರೀತಿ ಕೋಟೆ ಸಿಪಿಐ ಮತ್ತು ಸಿಬ್ಬಂದಿ ಲಷ್ಕರ್ ಮೊಹಲ್ಲಾದ ತಿರುಪಳಯ್ಯನ ಕೇರಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಎರದಕೆರೆ ಗ್ರಾಮದ ತಿಮ್ಮಯ್ಯ (55), ಶಿವಮೊಗ್ಗ ಎನ್.ಟಿ. ರಸ್ತೆಯ ಆರುಗಂ (64) ಮತ್ತು ಕುಂಬಾರ ಗುಂಡಿಯ ಶಂಕರ (36)ಎಂಬುವರನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 160 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ದೊಡ್ಡ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
Related Articles
Advertisement