ಅಕ್ಕಪಕ್ಕದಲ್ಲಿದ್ದ ನಾಲ್ಕು ನಗರಗಳಲ್ಲಿ ಒಮ್ಮೆ ಭೀಕರ ಬರಗಾಲ ಕಾಣಿಸಿಕೊಂಡಿತು. ಅಲ್ಲಿನ ಜನರು ಹಸಿವಿನಿಂದ ಒದ್ದಾಡುತ್ತಿದ್ದರು. ಆ ನಾಲ್ಕೂ ನಗರಗಳಲ್ಲಿ ಒಂದೊಂದು ಮೂಟೆ ಬೀಜವಿತ್ತು. ಮೊದಲನೇ ನಗರದ ಜನರಿಗೆ ಆ ಬೀಜದ ಮೂಟೆಯನ್ನು ಏನು ಮಾಡಬೇಕೆಂದೇ ತಿಳಿದಿರಲಿಲ್ಲ. ಹೀಗಾಗಿ ಅವರು ತಿನ್ನಲು ಆಹಾರವಿಲ್ಲದೆ ನರಳಿ ನರಳಿ ಸತ್ತರು.
ಎರಡನೆ ನಗರದಲ್ಲಿ ಒಬ್ಬನಿಗೆ ಮಾತ್ರ ಬೀಜದ ಬಳಕೆಯ ಅರಿವಿತ್ತು. ಆದರೆ ಆತ ನಾನೇ ಯಾಕೆ ಮಾಡಬೇಕು? ಎಂಬ ಧೋರಣೆ ತಾಳಿದ. ಹೀಗಾಗಿ ಕೆಲವೇ ದಿನಗಳಲ್ಲಿ ಅಲ್ಲಿನ ಜನರ ಜನರ ಜತೆ ಅವನೂ ಅಸುನೀಗಿದ.
ಇನ್ನು ಮೂರನೇ ನಗರದಲ್ಲೂ ಒಬ್ಬನಿಗೆ ಮಾತ್ರ ಬೀಜದ ಮೂಟೆ ಉಪಯೋಗಿಸುವ ಬಗ್ಗೆ ಮಾಹಿತಿ ಇತ್ತು. ಆತ ಜನರನ್ನು ಕರೆದು, ನಾನು ಈ ಬೀಜಗಳಿಂದ ನಿಮ್ಮೆಲ್ಲರ ಹಸಿವು ನೀಗುವಂತೆ ಮಾಡುತ್ತೇನೆ. ಬದಲಿಗೆ ನೀವು ನನ್ನನ್ನು ರಾಜನೆಂದು ಒಪ್ಪಿಕೊಳ್ಳಬೇಕು ಎಂದ. ಎಲ್ಲರೂ ಒಪ್ಪಿದರು.
ಅವನು ಬೀಜ ಬಿತ್ತಿ ಬೆಳೆ ಬೆಳೆದ. ಜನರಿಗೆಲ್ಲ ಹಂಚಿದ. ಆದರೆ ಅವರು ಅವನ ಅಡಿಯಾಳುಗಳಾಗಬೇಕಾಯಿತು.ವಿಶೇಷ ಎಂದರೆ ನಾಲ್ಕನೆಯ ನಗರದಲ್ಲೂ ಒಬ್ಬನಿಗೆ ಮಾತ್ರ ಬೀಜಗಳನ್ನು ಬಳಸುವ ರಿತಿ ತಿಳಿದಿತ್ತು. ಅವನು ಎಲ್ಲರನ್ನೂ ಕರೆದು ಬೀಜ ಬಿತ್ತಿ ಬೆಳೆ ಬೆಳೆಯುವ ವಿಧಾನ ತಿಳಿಸಿದ. ಎಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡರು. ಸಮೃದ್ಧ ಬೆಳೆ ಬಂತು. ಎಲ್ಲರೂ ಸಮಾನವಾಗಿ ಹಂಚಿಕೊಂಡು ಸೌಹಾರ್ಧದಿಂದ ಬದುಕಿದರು.