ಪುಣೆ: ಬೀದಿನಾಯಿಗಳು ಝೂ ಒಳಗೆ ನುಸುಳಿ ದಾಳಿಗೈದ ಪರಿಣಾಮ 4 ಕೃಷ್ಣಮೃಗಗಳು ಸಾವನ್ನಪ್ಪಿದ್ದು, ಒಂದು ಕೃಷ್ಣಮೃಗಕ್ಕೆ ಗಂಭೀರ ಗಾಯವಾದ ಘಟನೆ ಇಲ್ಲಿನ ರಾಜೀವ್ ಗಾಂಧಿ ಝೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ- ಶೆಡ್ನೂಲ್ 1ರ ಅನ್ವಯ ಕೃಷ್ಣ ಮೃಗಗಳನ್ನು ಸಂರಕ್ಷಿಸಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದೆ. ಇವುಗಳನ್ನು ಸೆರೆಹಿಡಿಯುವುದು, ಬೇಟೆಯಾಡುವುದನ್ನೂ ನಿಷೇಧಿಸಲಾಗಿದೆ. ರಾಜೀವ್ ಗಾಂಧಿ ಝೂನಲ್ಲಿ ಕೃಷ್ಣಮೃಗಗಳ ಆವಾಸದ ಸ್ಥಳಕ್ಕೆ ಭದ್ರ ಬೇಲಿಯನ್ನೂ ಹಾಕಲಾಗಿದೆ.
ಆದರೆ, ಕೆಲವು ಬೀದಿನಾಯಿಗಳು ಆಕಸ್ಮಿಕವಾಗಿ ಝೂ ಒಳಗೆ ನುಗ್ಗಿ ಈ ಅನಾಹುತ ಸೃಷ್ಟಿಸಿವೆ. “ಕೃಷ್ಣಮೃಗಗಳು ತುಂಬಾ ನಾಚಿಕೆಯ ಪ್ರಾಣಿಗಳು. ಬೀದಿನಾಯಿಗಳ ದಾಳಿಗೆ ಬೆಚ್ಚಿ 2 ಗಂಡು, 2 ಹೆಣ್ಣು ಕೃಷ್ಣಮೃಗಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ’ ಎಂದು ಝೂ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೊಳಗಾದ ಕೃಷ್ಣಮೃಗಗಳ ಆಕ್ರಂದನ ಕೇಳಿಸುತ್ತಿದ್ದಂತೆಯೇ ಝೂ ಗಾರ್ಡ್‌ಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳನ್ನು ಓಡಿಸಿದ್ದಾರೆ. ಝೂ ಆವರಣದಲ್ಲಿ ಒಂದು ಕಡೆ ಕಾಮಗಾರಿ ನಡೆಯುತ್ತಿದ್ದು, ಆ ಭಾಗದಿಂದ ನಾಯಿಗಳು ಒಳ ನುಸುಳಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಝೂನಲ್ಲಿ ಒಟ್ಟು 30 ಕೃಷ್ಣಮೃಗಗಳಿವೆ.