ಶಹಾಪುರ: ಕಳಭಟ್ಟಿ ಸಾರಾಯಿ ತಯಾರಿಕೆ ಮತ್ತು ಮಟ್ಕಾ, ಅಕ್ರಮ ಮರಳು ಸಾಗಾಟದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನರನ್ನು ಬಂಧಿಸಿದ ಘಟನೆ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಚಾಮನಾಳ ಮಡ್ಡಿ ತಾಂಡಾದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ರವಿ ಅಲಿಯಾಸ್ ರಾಜುಪೂರು ನಾಯ್ಕ ಅವರ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಕಳ್ಳಬಟ್ಟಿ ಸಾರಾಯಿ ಸಮೇತ ಆರೋಪಿ ರಾಜುನನ್ನು ಬಂಧಿಸಿದ್ದಾರೆ.
ಅದೇ ರೀತಿ ಚನ್ನೂರ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದ ಮುಂದೆ ಕಟ್ಟೆಯ ಮೇಲೆ ಮಟ್ಕಾ ಬರೆದುಕೊಳ್ಳುತ್ತಿರುವ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ದೇವಿಂದ್ರಪ್ಪ ಹಾಗೂ ಹನುಮಂತ ಎಂಬುವನನ್ನು ಬಂಧಿಸಿದ್ದಾರೆ.
ಕಾಟಮನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಚಾಲಕ ಮಲ್ಲಪ್ಪ ಎಂಬಾತನನ್ನು ದಸ್ತಗಿರಿ ಮಾಡಿ ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ. ಈ ಮೂರು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಐ ಶ್ರೀನಿವಾಸ್ ಅಲ್ಲಾಪುರೆ ಅವರ ನಿರ್ದೇಶನದಲ್ಲಿ ಗೋಗಿ ಠಾಣೆ ಪಿಎಸ್‌ಐ ಅಯ್ಯಪ್ಪನವರ್, ಶಹಾಪುರ ಠಾಣೆ ಪಿಎಸ್‌ಐ ರಾಹುಲ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.