ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೇರಳ ಮೂಲದವರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಈ ಮಾಹಿತಿಯನ್ನು ತಿಳಿಸಿದ್ದು, ಸೆ.15ರಂದು ಇಬ್ಬರನ್ನು ಮತ್ತು ಸೆ.18ರಂದು ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.
ಆರೋಪಿಗಳನ್ನು ಕೇರಳ ತಿರುವನಂತಪುರಂ ಮೂಲದ ರಘು ಮತ್ತು ಅಮೇಶ್ ಎಂದು ಗುರುತಿಸಲಾಗಿದೆ. ಅದಲ್ಲದೆ ಕಳವಾದ ಅಪಾರ್ಟ್ ಮೆಂಟ್ ನಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವೈನ್ ಶಾಪ್ ಒಂದರಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿರುವ ಸೇನೆಯಿಂದ ನಿವೃತ್ತಗೊಂಡಿರುವ ನವೀನ್ ಮತ್ತು ಅದೇ ವೈನ್ ಶಾಪಿನಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಬೆಳ್ತಂಗಡಿಯ ಸಂತೋಷ್ ಎಂಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!
ಕಳೆದ ಆ.17ರ ರಾತ್ರಿ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್ ನ ವಿದ್ಯಾ ಪ್ರಭು ಎಂಬವರ ಮನೆಗೆ ನುಗ್ಗಿದ್ದ ಕಳ್ಳರು ನಗ ನಗದು ದೋಚಿದ್ದರು. ತನಿಖೆ ಆರಂಭಿಸಿದ ಸುರತ್ಕಲ್ ಪೊಲೀಸರು ಮೊದಲು ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದರು. ತನಿಖೆ ಮುಂದುವರಿಸಿದಾಗ ಅದೇ ಫ್ಲಾಟಿನಲ್ಲಿ ವಾಸ ಮಾಡಿಕೊಂಡು ಸಂಚು ರೂಪಿಸಿದ್ದ ನವೀನ್ ಮತ್ತು ಸಂತೋಷ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಕಳ್ಳತನ ಮಾಡಿದ ಹಣದಲ್ಲಿ ದುಂದುವೆಚ್ಚ ಮಾಡಿದ್ದು, ಅವರ ವಶದಲ್ಲಿದ್ದ 30,85,710 ರೂ. ನಗದು ಹಣ ಮತ್ತು 224 ಗ್ರಾಂ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಲಾಗಿದೆ. ಈ ಪ್ರಕರಣದಲ್ಲಿ ಕೇರಳ ಮೂಲದ ಇನ್ನೂ ಇಬ್ಬರು ಆರೋಪಿಗಳಿದ್ದು ಅವರ ದಸ್ತಗಿರಿಗೆ ಬಾಕಿ ಇದೆ.