Advertisement

ಫೋಟೋಗ್ರಾಫ‌ರ್‌ನನ್ನು ಅಪಹರಿಸಿದ್ದ ನಾಲ್ವರ ಬಂಧನ

12:20 PM Mar 28, 2018 | |

ಬೆಂಗಳೂರು: ಹೊಸ ಸ್ಟುಡಿಯೋ ತೆರೆಯಲು ಹಣ ಹೊಂದಿಸಿಕೊಂಡಿದ್ದ ಫೋಟೋಗ್ರಾಫ‌ರ್‌ನನ್ನು ಅಪಹರಿಸಿ ಆತನ ಡೆಬಿಟ್‌ ಕಾರ್ಡ್‌ ಬಳಸಿ 2.72 ಲಕ್ಷ ರೂ. ಕಸಿದು ನಾಪತ್ತೆಯಾಗಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಬೊಮ್ಮನಹಳ್ಳಿ. ಪ್ರಶಾಂತ್‌ (22) ಎಂಬಾತನನ್ನು ಅಪಹರಿಸಿ ಹಣ ದರೋಡೆ ಮಾಡಿದ್ದ ಕಂಬತ್ತಹಳ್ಳಿಯ ಮಧುಕಿರಣ್‌ (32), ಮುನೇಶ್ವರ ಲೇಔಟ್‌ನ ಮಂಜುನಾಥ್‌ (29), ದೊಡ್ಡಕಲ್ಲಸಂದ್ರದ ಆನಂದ್‌ (26), ಜಿಗಣಿಯ ನರೇಂದ್ರ(2 4) ಬಂಧಿತರು.

ಮಾ. 10ರಂದು ಪ್ರತಾಪ್‌ನನ್ನು ಕೊತ್ತನೂರು ದಿಣ್ಣೆ ಬಳಿ ಆಪಹರಿಸಿದ್ದ ಆರೋಪಿಗಳು ಅವರ ಡೆಬಿಟ್‌ ಕಾರ್ಡ್‌ ಬಳಸಿ ಬಲವಂತವಾಗಿ 2.72 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಬಂಧಿತರಿಂದ 2.30 ಲಕ್ಷ ನಗದು, 1.5 ಲಕ್ಷ ಮೌಲ್ಯದ ಚಿನ್ನಾಭರಣ, 4 ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಟಿಯುವಿ-300 ಕಾರು, 1 ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಬಂಧಿತ ಮಂಜುನಾಥ್‌ ವಿರುದ್ಧ ನಗರದ ಠಾಣೆಯೊಂದರಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಮಧುಕಿರಣ್‌ ಮತ್ತು ಅವನ ಪರಿಚಿತರ ಪೂರ್ವನಿಯೋಜಿತ ಸಂಚಿನಂತೆ ಮಾ.10ರಂದು ರಾತ್ರಿ 10 ಗಂಟೆ ಸುಮಾರಿಗೆ ಪ್ರತಾಪ್‌ ಕೆಲಸ ಮುಗಿಸಿಕೊಂಡು ಕೊತ್ತನೂರು ದಿಣ್ಣೆ ಬಳಿ 80 ಸಾವಿರ ರೂ.ನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ಪ್ರತಾಪ್‌ನನ್ನು ಬಲವಂತವಾಗಿ ಕಾರಿನೊಳಗೆ ಎಳೆದು ಕೂರಿಸಿಕೊಂಡು, ಬೇಗೂರು ಕೊಪ್ಪ ರಸ್ತೆ ಮೈಲಸಂದ್ರ ದಿಣ್ಣೆಯಲ್ಲಿರುವ ಐಫೆಲ್‌ ಗ್ರೀನ್‌ ರೆಸೋರ್ಟ್‌ಗೆ ಕರೆದೊಯ್ದು ಗೃಹ ಬಂಧನದಲ್ಲಿರಿಸಿದ್ದರು.

2.72 ಲಕ್ಷ ರೂ. ಕಳವು: ಈ ವೇಳೆ ಪ್ರತಾಪ್‌ ಬಳಿಯಿದ್ದ ಮೊಬೈಲ್‌, 80 ಸಾವಿರ ನಗದು ಕಿತ್ತುಕೊಂಡಿದ್ದ ಆರೋಪಿಗಳು, ಬಲವಂತವಾಗಿ ಆತನಿಂದ ಡೆಬಿಟ್‌ ಕಾರ್ಡ್‌ ಮತ್ತು ಅದರ ಪಾಸ್‌ವರ್ಡ್‌ ಪಡೆದು ಮೈಲಸಂದ್ರ ದಿಣ್ಣೆಯಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂನಿಂದ 95 ಸಾವಿರ ರೂ. ಪಡೆದಿದ್ದರಲ್ಲದೆ, ಚುಂಚಘಟ್ಟ ಮುಖ್ಯರಸ್ತೆಯ ಮೇಘ ಜ್ಯುವೆಲ್ಲರಿ ಶಾಪ್‌ನಲ್ಲಿ 1.5 ಲಕ್ಷ ರೂ. ಹಣ ಪಾವತಿಸಿ ಮಕ್ಕಳ ಎರಡು ಚಿನ್ನದ ಸರ, ಒಂದು ಚಿನ್ನದ ಉಂಗುರ ಖರೀಸಿದ್ದರು.

Advertisement

ನಂತರ ಅದೇ ರಸ್ತೆಯಲ್ಲಿದ್ದ ಪೆಟ್ರೋಲ್‌ ಬಂಕ್‌ನಲ್ಲಿ ಕಾರಿಗೆ ಸ್ವಲ್ಪ ಪೆಟ್ರೋಲ್‌ ಹಾಕಿಸಿ, ನಮಗೆ ತುರ್ತು ಹಣ ಬೇಕಾಗಿದೆ ಎಂದು ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ನಂಬಿಸಿ ಡೆಬಿಟ್‌ ಕಾರ್ಡ್‌ ಬಳಸಿ 25 ಸಾವಿರ ರೂ. ಪಡೆದಿದ್ದರು. ಹೀಗೆ ಒಂದೇ ದಿನದಲ್ಲಿ ಡೆಬಿಟ್‌ ಕಾರ್ಡ್‌ನಿಂದ ಒಟ್ಟು 2.72 ಲಕ್ಷ ರೂ. ಪಡೆದಿದ್ದರು. ಅನಂತರ ಪ್ರತಾಪ್‌ಗೆ ಪೊಲೀಸರಿಗೆ ವಿಷಯ ತಿಳಿಸದ್ದಂತೆ ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದರು. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಈ ತಂಡ ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದೆ ಎಂದು ಅಧಿಕಾರಿ ವಿವರಿಸಿದರು.

ಅಪಹರಣದ ಮರು ದಿನವೇ ಹೊಸ ಸ್ಟುಡಿಯೋ: ಅಪಹರಣದ ಮರುದಿನವೇ ಪ್ರತಾಪ್‌ ಹೊಸ ಸ್ಟುಡಿಯೋ ತೆರೆಯಲು ದಿನಾಂಕ ಗೊತ್ತು ಮಾಡಿಕೊಂಡಿದ್ದರು. ಅಷ್ಟರಲ್ಲಿ ಅಪಹರಣವಾದ್ದರಿಂದ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅನಂತರ ಸ್ನೇಹಿತರು ಮತ್ತು ಸಂಬಂಧಿಕರು ಧೈರ್ಯ ತುಂಬಿದ್ದರಿಂದ ನಿಗದಿತ ದಿನಾಂಕವಾದ ಮಾ.11ರಂದು ಸಂಜೆ ಪ್ರತಾಪ್‌ ಹೊಸ ಸ್ಟುಡಿಯೋ ತೆರೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಚಯಸ್ಥನಿಂದಲೇ ಕೃತ್ಯ: ಆರೋಪಿಗಳ ಪೈಕಿ ಮಧುಕಿರಣ್‌ ಮತ್ತು ಅಪಹರಣಕ್ಕೊಳಗಾಗಿದ್ದ ಪ್ರತಾಪ್‌ ಇಬ್ಬರು ಪರಿಚಯಸ್ಥರಾಗಿದ್ದು, ಒಟ್ಟಿಗೆ ಫೋಟೋಗ್ರಾಫ‌ರ್‌ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಪ್ರತಾಪ್‌ ಕೋಣನಕುಂಟೆಯಲ್ಲಿ ಹೊಸ ಸ್ಟುಡಿಯೋ ತೆರೆಯಲು ಸ್ನೇಹಿತರು ಹಾಗೂ ಫೈನಾನ್ಸಿಯರ್‌ ಬಳಿ 3-4 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಈ ವಿಷಯ ತಿಳಿದಿದ್ದ ಮಧುಕಿರಣ್‌ ತನ್ನ ಇತರೆ ಸ್ನೇಹಿತರ ಜತೆ ಸೇರಿ ಪ್ರತಾಪ್‌ನನ್ನು ಅಪಹರಿಸಿ ಹಣ ಕಳವು ಮಾಡಲು ಸಂಚು ರೂಪಿಸಿದ್ದ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next