ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಪತ್ತೆಹಚ್ಚಿ ಕಳವು ಮಾಡುತ್ತಿದ್ದ ನಾಲ್ವರು ಆರೋಪಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 2.30 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ಮನೆಗಳತನಕ್ಕೆ ಬಳಸಿದ ಮೋಟಾರು ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನದ ಶಾಂತಿ ಗ್ರಾಮದ ಗಣೇಶ (39), ತಿಪಟೂರಿನ ಕುಮಾರ (30), ಕೆಂಗೇರಿಯ ರಿಯಾಜ್ ಅನೀಫ್ (33) ಹಾಗೂ ನಂದಿನಿ ಲೇಔಟ್‌ನ ಹಲ್ತಾಪ್ ಸಯೀದ್ ಅಬ್ದುಲ್ಲಾ (30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಶ್ರೀರಾಂಪುರ ಪೊಲೀಸರು ಹೇಳಿದ್ದಾರೆ.
ಶ್ರೀರಾಂಪುರದ ಜಕ್ಕರಾಯನ ಕೆರೆಯ ನಿವಾಸಿ ಅರ್ಮಗಂ ಎಂಬುವವರು ಕಳೆದ ಜ.16 ರಂದು ಮನೆಗೆ ಬೀಗ ಹಾಕಿ ಕೊಂಡು ತಮಿಳುನಾಡಿಗೆ ತೆರಳಿದ್ದಾಗ ಮನೆ ಬೀಗ ಮುರಿದು ಒಳ ನುಗ್ಗಿದ್ದ ಆರೋಪಿಗಳಾದ ಗಣೇಶ್, ಕುಮಾರ್ ಹಾಗೂ ರಿಯಾಜ್ ಬಿರುವಿನಲ್ಲಿ ಇಟ್ಟಿದ್ದ 60 ಗ್ರಾಂ ತೂಕದ 1 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಶ್ರೀರಾಮಪುರದ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಶಿವಾಜಿರಾವ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಹಳೇ ಪ್ರಕರಣಗಳು ಪತ್ತೆ: ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಶ್ರೀರಾಂಪುರ ಪೊಲೀಸ್ ಠಾಣೆಗಳಲ್ಲಿ ನಡೆದಿರುವ ಕೆಲವು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಾದ ಡಿ. ಗಣೇಶ್ ಮತ್ತು ಕುಮಾರ್ ಈ ಹಿಂದೆ ಶೇಷಾದ್ರಿಪುಂರ ಮತ್ತು ಶ್ರೀರಾಮಪುರ ಪೊಲೀಸ್ ಠಾಣೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಬಂಧನಗೊಂಡು ಬಿಡುಗಡೆಯಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಆಭರಣ ಕಳವು ಆರೋಪಿ ಬಂಧನ
ಚಿನ್ನಾಭರಣ ಕಳವು ಆರೋಪಿ ಸಯೆದ್ ಅಬ್ದುಲ್ಲಾ (31) ಎಂಬುವನ್ನು ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು, ಆತನಿಂದ 1.50 ಲಕ್ಷ ರೂ. ಬೆಳೆಬಾಳುವ ಚಿನ್ನಾಭರಣ ಮತ್ತು ಮನೆಗಳತ್ತನಕ್ಕೆ ಬಳಸಿದ ಮೋಟಾರು ಬೈಕ್ ಅನ್ನು ವಶಕ್ಕೆ ಪಡಿಸಿದ್ದಾರೆ. ಆರೋಪಿ ನಂದಿನಿ ಲೇಔಟ್‌ನ ನಿವಾಸಿ ಜಯಮ್ಮ ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವುದು ಈ ವೇಳೆ ಬೆಳಕಿಗೆ ಬಂದಿದೆ.
ಜಯಮ್ಮ ಅವರು ಜ.15 ರ ಮಧ್ಯಾಹ್ನದ ವೇಳೆ ತಮ್ಮ ಸಂಬಂಧಿಕರ ಮನೆಗೆ ತೆರಳಿರುವುದನ್ನು ಅರಿತಿದ್ದ ಆರೋಪಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲೇಶ್ವರ ಉಪ ವಿಭಾಗದ ಎಸಿಪಿ ವಿ.ಧನಂಜಯ ನೇತೃತ್ವದಲ್ಲಿ ನಂದಿನಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.