Advertisement

ಫೌಂಡ್ರಿ ಉದ್ಯಮದಲ್ಲಿ ಚಿಗುರಿದ ಆಸೆ

03:05 PM Nov 29, 2022 | Team Udayavani |

ಬೆಳಗಾವಿ: ಇಂಗ್ಲೆಂಡ್‌, ಫ್ರಾನ್ಸ್‌ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳೊಂದಿಗೆ ವ್ಯಾಪಾರ-ವಹಿವಾಟು ಸಂಪರ್ಕ ಹೊಂದಿರುವ ಬೆಳಗಾವಿಯ ಫೌಂಡ್ರಿ ಉದ್ಯಮಿಗಳಲ್ಲಿ ಹೊಸ ಭರವಸೆಯ ಬೆಳಕು ಕಾಣಿಸಿಕೊಂಡಿದೆ.

Advertisement

ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರು ನಂತರ ರಾಜ್ಯ ಸರಕಾರಕ್ಕೆ ತೆರಿಗೆ ರೂಪದಲ್ಲಿ ಅತೀ ಹೆಚ್ಚಿನ ಆದಾಯ ನೀಡುತ್ತಿರುವ ಗಡಿ ಜಿಲ್ಲೆ ಬೆಳಗಾವಿ ಮಾಹಿತಿ ತಂತ್ರಜ್ಞಾನ ಮತ್ತು ಫೌಂಡ್ರಿ ಕ್ಷೇತ್ರದಲ್ಲಿ ಹೊಸ ಆಶಾದಾಯಕ ಬೆಳವಣಿಗೆ ನೋಡುತ್ತಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಈ ಆಶಾದಾಯಕ ಹೆಜ್ಜೆಗೆ ಮುನ್ನುಡಿ ಬರೆದಿದೆ. ಬಹಳ ವರ್ಷಗಳ ಬೇಡಿಕೆ ಕಾರ್ಯರೂಪಕ್ಕೆ ಬರುವ ವಿಶ್ವಾಸ ಕಾಣಿಸಿಕೊಂಡಿದೆ.

ನೆರೆಯ ಗೋವಾ ಮತ್ತು ಮಹಾರಾಷ್ಟ್ರದಿಂದ ಇಲ್ಲಿಯ ಉದ್ಯಮಿಗಳ ಸೆಳೆತ ಆರಂಭವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳು ಸಭೆ ನಡೆಸಿರುವದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳು ಅನುಷ್ಠಾನಕ್ಕೆ ಬಂದಿದ್ದೇ ಅದರೆ ಬೆಳಗಾವಿ ಜಿಲ್ಲೆ ಆದಷ್ಟು ಬೇಗ ಫೌಂಡ್ರಿ ಪಾರ್ಕ್‌ ಕಾಣಲಿದೆ.

ಹಾಗೆ ನೋಡಿದರೆ ಬೆಳಗಾವಿ ಕೈಗಾರಿಕೆಗಳಿಗೆ ಸಾಕಷ್ಟು ಅನುಕೂಲಕರವಾದ ಜಿಲ್ಲೆ. ಸಮೃದ್ಧ ಸಂಪನ್ಮೂಲ ಇದೆ. ಆದರೆ ಕೈಗಾರಿಕೆಗಳಿಗೆ ಅಗತ್ಯವಾಗಿ ಬೇಕಿರುವ ಜಾಗದ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಬೆಂಗಳೂರು ನಂತರ ಸರಕಾರಕ್ಕೆ ತೆರಿಗೆ ರೂಪದಲ್ಲಿ ಹೆಚ್ಚು ಆದಾಯ ನೀಡುವ ಜಿಲ್ಲೆಯಾಗಿದ್ದರೂ ಅದಕ್ಕೆ ತಕ್ಕಂತೆ ಸೌಲಭ್ಯಗಳು ಇಲ್ಲಿ ಕಾಣುತ್ತಿಲ್ಲ. ಈ ಕೊರಗು ಉದ್ಯಮಿಗಳನ್ನು ಬಹಳವಾಗಿ ಕಾಡುತ್ತಿದೆ.

ಫೌಂಡ್ರಿ ಕ್ಷೇತ್ರದ ಬಗ್ಗೆ ಹೇಳುವುದಾದರೆ ಬೆಳಗಾವಿಯ ಫೌಂಡ್ರಿ ಉದ್ಯಮ ದೇಶದಲ್ಲೇ ಅತ್ಯುತ್ತಮ ಹೆಸರು ಮಾಡಿದೆ. ಇಲ್ಲಿರುವ 200 ಫೌಂಡ್ರಿ ಘಟಕಗಳು ವಾರ್ಷಿಕವಾಗಿ 1500ರಿಂದ 2000 ಕೋಟಿ ರೂ. ವಹಿವಾಟು ಹೊಂದಿದ್ದು ತೆರಿಗೆ ರೂಪದಲ್ಲಿ ರಾಜ್ಯ ಸರಕಾರಕ್ಕೆ ಅಪಾರ ಪ್ರಮಾಣದಲ್ಲಿ ಆದಾಯ ಕೊಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಬಹುತೇಕ ಫೌಂಡ್ರಿ ಘಟಕಗಳು ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ ಎಂಬುದು ಗಮನಿಸಬೇಕಾದ ಸಂಗತಿ.

Advertisement

ಬೆಳಗಾವಿ ನಗರವೊಂದರಲ್ಲೇ ಇರುವ 200ಕ್ಕೂ ಹೆಚ್ಚು ಫೌಂಡ್ರಿಗಳಿಂದ ಪ್ರತಿ ತಿಂಗಳು 10 ಸಾವಿರ ಟನ್‌ ಉತ್ಪಾದನೆಯಾಗುತ್ತದೆ. ತಿಂಗಳಿಗೆ 100 ಕೋಟಿಗೂ ಹೆಚ್ಚು ವ್ಯಾಪಾರ-ವಹಿವಾಟು ನಡೆಯುತ್ತಿದೆ. ವಿಶೇಷವೆಂದರೆ ಪ್ರತಿಶತ 40ರಷ್ಟು ಫೌಂಡ್ರಿ ಕೈಗಾರಿಕೆಗಳು ಹೊರದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಈ ಎಲ್ಲ ಅಂಶಗಳಿಂದ ದೇಶದ ಫೌಂಡ್ರಿ ಉದ್ಯಮದಲ್ಲಿ ಬೆಳಗಾವಿ 10ನೇ ಸ್ಥಾನದಲ್ಲಿದೆ.

ಇಷ್ಟೆಲ್ಲಾ ಇದ್ದರೂ ನಮಗೆ ಒಂದು ಪ್ರತ್ಯೇಕ ಫೌಂಡ್ರಿ ಪಾರ್ಕ್‌ ಇಲ್ಲ ಎಂಬ ಕೊರಗು ಈ ಉದ್ಯಮಿಗಳನ್ನು ಕಾಡುತ್ತಿದೆ. ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಫೌಂಡ್ರಿ ಕೈಗಾರಿಕಾ ಪ್ರದೇಶವಿದ್ದು ಅಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿರುವುದರಿಂದ ಅಲ್ಲಿ ಪ್ರತಿ ತಿಂಗಳು ಫೌಂಡ್ರಿಗಳಿಂದ 70 ಸಾವಿರ ಟನ್‌ ಉತ್ಪಾದನೆಯಾಗುತ್ತಿದೆ. ನಮ್ಮಲ್ಲಿ ಇದೇ ರೀತಿಯ ಪಾರ್ಕ್‌ ಮಾಡುವುದರಿಂದ ನಾವೂ ಸಹ ಪ್ರತಿ ತಿಂಗಳು 50 ಸಾವಿರ ಟನ್‌ ಉತ್ಪಾದನೆ ಮಾಡಬಹುದು ಎನ್ನುತ್ತಾರೆ ಫೌಂಡ್ರಿ ಉದ್ಯಮಿಗಳು.

ಬೆಳಗಾವಿ ಸಮೀಪ 25ರಿಂದ 30 ಕಿಲೋಮೀಟರ್‌ ವ್ಯಾಪ್ತಿಯಲ್ಲಿ 500 ಎಕರೆ ಜಾಗದಲ್ಲಿ ಫೌಂಡ್ರಿ ಪಾರ್ಕ್‌ ಸ್ಥಾಪನೆ ಮಾಡಬೇಕು. ಖಾನಾಪುರ ರಸ್ತೆ ಇಲ್ಲವೇ ಹತ್ತರಗಿ ಬಳಿ ಈ ಪಾರ್ಕ್‌ ಸ್ಥಾಪನೆ ಮಾಡಬಹುದು ಎಂದು ಉದ್ಯಮಿಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಜಾಗ ನೀಡಿದರೆ ವಿಶೇಷ ಆರ್ಥಿಕ ವಲಯದ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬಹುದು ಎಂಬುದು ಉದ್ಯಮಿಗಳ ಅಭಿಪ್ರಾಯ.

ಇದರ ಮಧ್ಯೆ ಫೌಂಡ್ರಿ ಪಾರ್ಕ್‌ಅನ್ನು ಕಿತ್ತೂರ ಸಮೀಪ ಈಗಾಗಲೇ ಅಭಿವೃದ್ಧಿಪಡಿಸಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಿರ್ಮಾಣ ಮಾಡಬೇಕು ಎಂಬ ಆಲೋಚನೆ ಸರಕಾರದ ಮುಂದಿದೆ. ಆದರೆ ಇದಕ್ಕೆ ಬೆಳಗಾವಿ ಉದ್ಯಮಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಫೌಂಡ್ರಿಗಳಿರುವುದು ಬೆಳಗಾವಿಯಲ್ಲಿ. ಹೀಗಿರುವಾಗ ಹುಬ್ಬಳ್ಳಿ ಬಳಿ ಫೌಂಡ್ರಿ ಪಾರ್ಕ್‌ ನಿರ್ಮಾಣ ಮಾಡುವುದು ಸರಿಯಾದ ನಿರ್ಧಾರ ಅಲ್ಲ ಎಂಬುದು ಫೌಂಡ್ರಿ ಉದ್ಯಮಿಗಳ ಅಭಿಪ್ರಾಯ.

ಹತ್ತರಗಿ ಬಳಿ ಈಗಿರುವ ವಿಶೇಷ ಆರ್ಥಿಕ ವಲಯದ ರೀತಿ ಫೌಂಡ್ರಿ ಪಾರ್ಕ್‌ ನಿರ್ಮಾಣ ಮಾಡಿದರೆ ಬೆಳಗಾವಿಯ ಜೊತೆಗೆ ಮಹಾರಾಷ್ಟ್ರದಿಂದ ಬರುವ ಉದ್ಯಮಿಗಳಿಗೂ ಅನುಕೂಲವಾಗುತ್ತದೆ. ಮುಖ್ಯವಾಗಿ ರಪು¤ ಆಧಾರಿತ ಕೈಗಾರಿಕೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗುತ್ತದೆ ಎನ್ನುತ್ತಾರೆ ಫೌಂಡ್ರಿ ಉದ್ಯಮಿಗಳು.

ಇದೇ ನಿಟ್ಟಿನಲ್ಲಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ಕೈಗಾರಿಕೋದ್ಯಮಿಗಳ ಸಭೆ ಫೌಂಡ್ರಿ ಉದ್ಯಮಿಗಳಲ್ಲಿ ಹೊಸ ಆಸೆ ಚಿಗುರಿಸಿದೆ. ಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿರುವದು ಸಕಾರಾತ್ಮಕ ಬೆಳವಣಿಗೆಯಾಗಿ ಕಂಡಿದೆ.

ಬೆಳಗಾವಿಯಲ್ಲಿ ಫೌಂಡ್ರಿ ಉದ್ಯಮದ ಬೆಳವಣಿಗೆಗೆ ಪ್ರತ್ಯೇಕ ಪಾರ್ಕ್‌ ನಿರ್ಮಾಣ ಮಾಡಬೇಕು ಎಂಬುದು ಬಹಳ ವರ್ಷಗಳ ಬೇಡಿಕೆ. ಫೌಂಡ್ರಿ ಪಾರ್ಕ್‌ ಸ್ಥಾಪನೆ ಮಾಡಿದರೆ ಇದರಿಂದ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ಬಾಗಿಲು ತೆರೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷಾಂತರ ಜನರಿಗೆ ನೇರ ಉದ್ಯೋಗದ ಅವಕಾಶಗಳು ದೊರೆಯಲಿದೆ. ಇದಲ್ಲದೆ ಪರೋಕ್ಷವಾಗಿ ಐದು ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.  -ರಾಮ ಬಂಢಾರಿ, ಫೌಂಡ್ರಿ ಕ್ಲಸ್ಟರ್‌ ಅಧ್ಯಕ್ಷ

ಬೆಳಗಾವಿಯಲ್ಲಿ ಫೌಂಡ್ರಿ ಪಾರ್ಕ್‌ ಸ್ಥಾಪನೆ ಮಾಡಬೇಕು ಎಂಬ ಪ್ರಸ್ತಾವನೆ ಮೊದಲಿಂದಲೂ ಇದೆ. ಈಗ ಸ್ವತಃ ಮುಖ್ಯಮಂತ್ರಿಗಳು ಇದರ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಫೌಂಡ್ರಿ ಪಾರ್ಕ್‌ ಸ್ಥಾಪನೆ ಮಾಡುವುದರಿಂದ ಬೆಳಗಾವಿಯಲ್ಲಿರುವ ಸುಮಾರು 200 ಫೌಂಡ್ರಿಗಳ ಚಿತ್ರಣವೇ ಬದಲಾಗಲಿದೆ. ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಸಣ್ಣ ಪ್ರಮಾಣದ ಫೌಂಡ್ರಿಗಳಿಗೆ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ಇದು ಸಹಾಯವಾಗಲಿದೆ.   –ರೋಹನ್‌ ಜುವಳಿ, ಬೆಳಗಾವಿ ಉದ್ಯಮಿ

„ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next