Advertisement

ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮೊಸಳೆ ಮೇಲಿನ ಸವಾರಿ: ಮರಿತಿಬ್ಬೇಗೌಡ

10:37 PM Mar 21, 2024 | Team Udayavani |

ಹುಬ್ಬಳ್ಳಿ: ಬಿಜೆಪಿ ಜತೆಗಿನ ಜೆಡಿಎಸ್‌ ಮೈತ್ರಿಯು ಮೊಸಳೆ ಮೇಲಿನ ಸವಾರಿಯಾಗಲಿದೆ. ಬಿಜೆಪಿ ಜತೆ ಮೈತ್ರಿ ಬಗ್ಗೆ ಯಾವುದೇ ಶಾಸಕರು, ನಾಯಕರು, ಕಾರ್ಯಕರ್ತರನ್ನು ಕೇಳದೆ  ಎಚ್‌.ಡಿ.ದೇವೇಗೌಡರು ಮತ್ತು  ಕುಮಾರಸ್ವಾಮಿ ನಿರ್ಣಯ ಕೈಗೊಂಡಿದ್ದಾರೆ. ಅನುಕೂಲಸಿಂಧು ಹೊಂದಾಣಿಕೆ ರಾಜಕೀಯಕ್ಕೆ ಜನ ತಕ್ಕ ಉತ್ತರ ನೀಡಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.

Advertisement

ಗುರುವಾರ ಮೇಲ್ಮನೆ  ಸಭಾಪತಿ ಬಸವರಾಜ ಹೊರಟ್ಟಿ ಅವರ ಗೃಹ ಕಚೇರಿಯಲ್ಲಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ನಿಷ್ಠಾವಂತರಿಗೆ ಮನ್ನಣೆ ಇಲ್ಲ. ಎಚ್‌.ಡಿ.ದೇವೇಗೌಡರ ಕುಟುಂಬದ 2-3 ಜನರು ಕೈಗೊಳ್ಳುವ ನಿರ್ಣಯವೇ ಅಂತಿಮ ಎನ್ನುವಂತಿದ್ದು, ಕುಟುಂಬಕ್ಕೆ ಸೀಮಿತ ಪಕ್ಷವಾಗಿದೆ ಹೊರತು ಅದು ಜಾತ್ಯತೀತ ಪಕ್ಷವಾಗಿಲ್ಲ.  ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಜೆಡಿಎಸ್‌ ಎಂಬುದು ಎಚ್‌.ಡಿ.ದೇವೇಗೌಡರ ಕುಟುಂಬ ಪಕ್ಷವಾಗಿದೆ ಎಂದು ಬಹಿರಂಗವಾಗಿ ಟೀಕಿಸಿದ್ದರು. ಈಗ ಅದೇ ಕುಟುಂಬ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದರು.

ಕೆಂಗಣ್ಣು ಬೀರಿದರು, ದೂರವಿಟ್ಟರು:

ಈ ಹಿಂದೆ ನಾನು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದೆ. ಬಳಿಕದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ತಪ್ಪಿಸಿದ್ದು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ. ಆಗ ನಾನು ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದೆ. ಅನಂತರದ ಚುನಾವಣೆಯಲ್ಲಿ ಅವರೇ ಜೆಡಿಎಸ್‌ಗೆ ಆಹ್ವಾನಿಸಿ ಟಿಕೆಟ್‌ ನೀಡಿದರು. ಎರಡು ಬಾರಿ ಜೆಡಿಎಸ್‌ನಿಂದ ಆಯ್ಕೆಯಾದೆ, ಜೆಡಿಎಸ್‌ ನನ್ನನ್ನು ಉಪ ಸಭಾಪತಿಯನ್ನಾಗಿ ಮಾಡಿತ್ತು ಎಂದರು.

ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಹುತೇಕರು ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಬೆಂಬಲ ಸೂಚಿಸಿದ್ದರು. ಆದರೆ ನಾನು ಮಾತ್ರ ನಿಖೀಲ್‌ಗೆ ಬೇಡ, ಅಲ್ಲಿನ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಎಂದು ಹೇಳಿದ್ದೆ. ಅಂದಿನಿಂದ ಪಕ್ಷದ ವರಿಷ್ಠರು ನನ್ನ ವಿರುದ್ಧ ಕೆಂಗಣ್ಣು ಬೀರತೊಡಗಿದರು. ಪಕ್ಷದ ಕಾರ್ಯಕ್ರಮಗಳಿಂದ ದೂರವಿರಿಸಿದರು. ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ನನಗೆ ಆಹ್ವಾನ ನೀಡುತ್ತಿರಲಿಲ್ಲ ಎಂದರು.

Advertisement

ಅಧಿವೇಶನದಲ್ಲಿ ನಾನು ಕಾಂಗ್ರೆಸ್‌ ಪರ ಇರುತ್ತಿದ್ದೆ ಎಂಬ ಜೆಡಿಎಸ್‌ನವರ ಆರೋಪ ಸುಳ್ಳು. ನಾನು ವಿಷಯಾಧಾರಿತವಾಗಿ ಬೆಂಬಲ ನೀಡಿದ್ದೇನೆ. ತಮ್ಮದು ರೈತಪರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ವರಿಷ್ಠರು, ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಮಂಡನೆ ಸಂದರ್ಭದಲ್ಲಿ ಅಂದಿನ ಆಡಳಿತರೂಢ ಬಿಜೆಪಿ ಸರಕಾರಕ್ಕೆ ಬೆಂಬಲವಾಗಿ ನಿಂತರು. ಆದರೆ ನಾನು ರೈತಪರ ಕಾಳಜಿಯೊಂದಿಗೆ ಆತ್ಮಸಾಕ್ಷಿಗನುಗುಣವಾಗಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದೆ ಎಂದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಶಿಕ್ಷಕರ ಮತದಾರರು, ಹಿತೈಷಿಗಳು, ಬೆಂಬಲಿಗರೊಂದಿಗೆ ಚರ್ಚಿಸಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳಹಿಸಿಕೊಡುತ್ತೇನೆ. ಇನ್ನೆರಡು ದಿನಗಳಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಬಹಿರಂಗಪಡಿಸುತ್ತೇನೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗಿಳಿಯುತ್ತೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next