Advertisement
ಎಸ್‌ಎಂಕೆ ಮಾತು ಕೇಳದೆ ಸೋತೆಜೆಡಿಯುನಿಂದ ಹಲವು ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದರು. ಆಗ ಕೃಷ್ಣ “ಆ’ ಒಬ್ಬ ವ್ಯಕ್ತಿಯನ್ನು ಮಾತ್ರ ಸೇರಿಸಿಕೊಳ್ಳುವುದು ಬೇಡ ಎಂದಿದ್ದರು. ಈಗ ಅವರ ಹೆಸರು ಹೇಳಲ್ಲ. ನಾನು “ಆ’ ವ್ಯಕ್ತಿಯನ್ನು ಸೇರಿಸಿಕೊಳ್ಳಿ ಎಂದು ಮನವರಿಕೆ ಮಾಡಿದ್ದೆ. ಸತತ 7 ಬಾರಿ ಲೋಕಸಭಾ ಚುನಾವಣೆ ಗೆದ್ದ ನಾನು, 8ನೇ ಬಾರಿ ಗೆದ್ದು ಬಾಬು ಜಗಜೀವನ್ ರಾಮ್‌ರ ದಾಖಲೆ ಸರಿಗಟ್ಟಲು ಸಿದ್ಧತೆ ನಡೆಸಿದ್ದೆ. ಆದರೆ “ಆ’ ವ್ಯಕ್ತಿಯಿಂದಾಗಿ ನಾನು 2019ರಲ್ಲಿ ಸೋತೆ. ಕೃಷ್ಣ ನೀಡಿದ್ದ ಎಚ್ಚರಿಕೆಯನ್ನು ಕೇಳದ್ದಕ್ಕೆ ಹೀಗಾಯಿತು.
ತೆಲಗಿ ಕೇಸ್ ಸಿಬಿಐಗೆ ಹೋಗಿದ್ದು ಹೀಗೆ!
ಕರೀಂ ಲಾಲ್ ತೆಲಗಿಯ ನಕಲಿ ಛಾಪಾ ಕಾಗದ ಪ್ರಕರಣ ಭಾರೀ ಸದ್ದು ಮಾಡಿತ್ತು. ಕ್ಯಾಬಿನೆಟ್ ಇದ್ದ ದಿನ ನಾನು ಬೆಳ್ಳಂಬೆಳಗ್ಗೆ ಎಸ್‌ಎಂಕೆ ಮನೆಗೆ ಹೋಗಿದ್ದೆ. ಅವರು ತಮ್ಮ ಜೊತೆ ತಿಂಡಿ ತಿನ್ನಲು ನನ್ನನ್ನು ಕರೆದಿದ್ದರು. ನಾವು ತಿಂಡಿ ತಿನ್ನುತ್ತಿರುವಾಗ ಕೃಷ್ಣ ಅವರ ಪತ್ನಿ ಪ್ರೇಮಾ “ತೆಲಗಿ ಪ್ರಕರಣ ಭಾರೀ ಸುದ್ದಿಯಲ್ಲಿದೆ, ಸಿಬಿಐಗೆ ಕೊಟ್ಟು ಬಿಡಿ ಅಂದರು. ಆಗ ಕೃಷ್ಣ, ಸುಮ್ಮನಿರುವಂತೆ ಸೂಚಿಸಿದರು. ಕ್ಯಾಬಿನೆಟ್‌ಗೆ ಹೋಗುವಾಗ ನನ್ನನ್ನು ಪಕ್ಕ ಕೂರಿಸಿಕೊಂಡು, “ಪ್ರೇಮಾ ಹೇಳಿದ್ದರ ಬಗ್ಗೆ ನಿನ್ನ ಅನಿಸಿಕೆ ಏನು’ ಎಂದು ಕೇಳಿದರು. ಸಿಬಿಐಗೆ ಕೊಡುವುದು ಒಳ್ಳೆಯದು ಎಂದೆ. ಆಗ ಕ್ಯಾಬಿನೆಟ್‌ನಲ್ಲಿ ವಿಚಾರ ಪ್ರಸ್ತಾಪಿಸುವಂತೆ ಹೇಳಿದರು. ನಾನು ವಿಚಾರ ಪ್ರಸ್ತಾಪಿಸಿದೆ. ಕೊನೆಗೆ ಸಿಬಿಐಗೆ ವಹಿಸಿದರು.
-ಡಾ. ಜಿ. ಪರಮೇಶ್ವರ್, ಗೃಹ ಸಚಿವ ಬಿಜೆಪಿ ಸೇರಿಸಿದ ಪುಣ್ಯಾತ್ಮ
ಎಸ್‌ಎಂಕೆ ಅವರು ಬಿಜೆಪಿ ಸೇರುವ ಮುಂಚಿತವಾಗಿ ನನಗೆ ಫೋನ್ ಮಾಡಿ, ನಿಮ್ ಪಕ್ಷ ಸೇರುತ್ತಿರುವುದಾಗಿ ಹೇಳಿದರು. ಇದು ಸಂತಸದ ವಿಚಾರ ಎಂದು ಹೇಳಿದ್ದೆ. ಆನಂತರ ನನ್ನನ್ನು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ನಾನು ಎಲ್ಲಿ ಸಿಕ್ಕರೂ “ಇವನೇ ನೋಡಿ ನನ್ನನ್ನು ಬಿಜೆಪಿ ಸೇರಿಸಿದ ಪುಣ್ಯಾತ್ಮ’ ಎಂದು ಹೇಳುತ್ತಿದ್ದರು.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ
Related Articles
ನಾನು ಎಸ್‌ಎಂಕೆ ಅವರು ರಾಜ್ಯಪಾಲರಾದ ಹಿನ್ನೆಲೆಯಲ್ಲಿ ತೆರವಾದ ಚಾಮರಾಜಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಅವರು ಕರೆ ಮಾಡಿ ನನ್ನನ್ನು ಅಭಿನಂದಿಸಿದರು. ನಮ್ಮ ನ್ಯಾಷನಲ್ ಟ್ರಾವೆಲ್ಸ್ ನ ಬಸ್‌ಗಳು ಮದ್ದೂರಿನಲ್ಲಿ ಸಂಚರಿಸುತ್ತಿದ್ದುದ್ದರಿಂದ ನನ್ನ ತಂದೆಗೆ ಅವರೊಂದಿಗೆ ವಿಶೇಷ ಒಡನಾಟವಿತ್ತು. ನಾನು ನ್ಯಾಷನಲ್ ಟ್ರಾವೆಲ್ಸ್ ನ ಸಣ್ಣ ಕಚೇರಿಯೊಂದನ್ನು ತೆರೆದಾಗ ಅದರ ಉದ್ಘಾಟನೆಗೆ ಬಂದಿದ್ದರು.
-ಜಮೀರ್‌ಅಹ್ಮದ್, ವಸತಿ ಮತ್ತು ವಕ್ಫ್ ಸಚಿವ
Advertisement
ಆದರ್ಶ ರಾಜಕಾರಣಿ ಎಸ್.ಎಂ ಕೃಷ್ಣ ಆದರ್ಶ ರಾಜಕಾರಣಿ. ರಾಜ್ಯಪಾಲರು, ವಿದೇಶ ಮಂತ್ರಿ ಆಗಿದ್ದವರು. ಅವರನ್ನು ಕಳೆದು ಕೊಂಡಿದ್ದೇವೆ. ದುಃಖ ಕಾಡುತ್ತಿದೆ.-ಥಾವರ್ ಚಂದ್ ಗೆಹ್ಲೋಟ್ ರಾಜ್ಯಪಾಲರು ಕೃಷ್ಣರ ಫಿಯೆಟ್ ಕಾರು ಖರೀದಿಸಿದ್ದೆ
ಎಸ್‌ಎಂಕೆ ಅವರಲ್ಲಿದ್ದ ಫಿಯೆಟ್ ಕಾರೊಂದನ್ನು ಮಾರುತ್ತಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿತು. ನಾನೇ ಅದನ್ನು ಕೊಂಡುಕೊಳ್ಳುವೆ ಎಂದು ಹೇಳಿದೆ. ಸುಮಾರು 60 ಸಾವಿರ ರೂ. ನೀಡಿ ಖರೀದಿಸಿದೆ. ನನ್ನ ಬಳಿ ಆ ಕಾರು ಎರಡು ಬಾರಿ ಆಕ್ಸಿಡೆಂಟ್ ಆಯಿತು. ಈ ಬಗ್ಗೆ ಎಸ್‌ಎಂಕೆಗೆ ಹೇಳಿದಾಗ ಆ ಕಾರು ನನ್ನ ಬಳಿಯೂ ಒಮ್ಮೆ ಆಕ್ಸಿಡೆಂಟ್ ಆಗಿತ್ತು. ತಕ್ಷಣವೇ ಆ ಕಾರನ್ನು ಮಾರಿ ಬಿಡು ಎಂದು ಹೇಳಿದರು.
-ಅಪ್ಪಾಜಿ ನಾಡಗೌಡ, ಶಾಸಕ ಕಾಂಗ್ರೆಸ್ ಸೇರಿಕೊಳ್ಳಿ ಎಂದಿದ್ದರು
ನಾನು ಕಾಂಗ್ರೆಸ್ ಸೇರುವುದು ಎಂದು ತೀರ್ಮಾನವಾದ ಬಳಿಕ ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್‌ಎಂಕೆ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಾನು ಕಾಂಗ್ರೆಸ್ ಸೇರಿಕೊಳ್ಳೋಣ ಎಂದಿರುವುದಾಗಿ ಅವರಿಗೆ ತಿಳಿಸಿದೆ. ಅವರು ಬನ್ನಿ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಹೇಳಿದ್ದರು. ನಾನು ಮಹಾದೇವಪ್ಪ ಮತ್ತು ಸಿ.ಎಂ.ಇಬ್ರಾಹಿಂ ಹೋಗಿದ್ದೆವು.
-ಸಿದ್ದರಾಮಯ್ಯ, ಮುಖ್ಯಮಂತ್ರಿ ಶಿಸ್ತುಬದ್ಧ ರಾಜಕಾರಣಿ
ವೃತ್ತಿಗೆ ಗೌರವ ತಂದುಕೊಟ್ಟ ಧೀಮಂತ. ಅವರು ಸಿಎಂ ಆಗಿದ್ದಾಗ ಜನ ತಮಾಷೆ ಮಾಡಿ ದರೂ, ಬೆಂಗಳೂರನ್ನು ಸಿಂಗಾಪುರ ಮಾಡುವತ್ತ ನಡೆಸಿದರು.
-ಸದಾನಂದ ಗೌಡ, ಮಾಜಿ ಸಚಿವ ಬ್ರ್ಯಾಂಡ್ ಬೆಂಗ್ಳೂರು ರೂವಾರಿ
ಸುವರ್ಣಸೌಧ: ಎಸ್.ಎಂ. ಕೃಷ್ಣ ಅವರನ್ನು ಯಾರು ಮರೆತರೂ ಬೆಂಗಳೂರಿನ ಜನರು ಮರೆಯಲಾಗದು. ಇಂದು ನಾವೆಲ್ಲರೂ ಹೇಳುವ “ಬ್ರ್ಯಾಂಡ್ ಬೆಂಗಳೂರು’ ಎಂಬ ಪರಿಕಲ್ಪನೆಯ ರೂವಾರಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ. ಅಲ್ಲದೆ, ಮಹಾತ್ಮ ಗಾಂಧೀಜಿಗೆ ಅವರು ತಮ್ಮ ಕಿವಿಯೋಲೆಯನ್ನೇ ಕೊಟ್ಟಿದ್ದರು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನ ಜನ ಎಂದಿಗೂ ಎಸ್.ಎಂ.ಕೃಷ್ಣ ಅವರ ಅಭಿವೃದ್ಧಿ ಕಾರ್ಯವನ್ನು ಮರೆಯುವುದಿಲ್ಲ. ಇಂದು ಯಾವುದೇ ಅಂತಾರಾಷ್ಟ್ರೀಯ ನಾಯಕ ದೇಶಕ್ಕೆ ಬಂದರೆ ತಪ್ಪದೆ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಇಂತಹ ಘನತೆ ಬೆಂಗಳೂರು ನಗರಕ್ಕೆ ಬರಲು ಎಸ್.ಎಂ.ಕೃಷ್ಣ ಕಾರಣ ಎಂದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಪ್ರತ್ಯೇಕ ಟಾಸ್ಕ್ ಪೋರ್ಸ್ ರಚಿಸಿ, ಕಳಪೆ ಕಾಮಗಾರಿ ಆಗದ ರೀತಿ ನೋಡಿಕೊಂಡರು. ಪತ್ರಿಷ್ಠಿತ ಇಂಡಿಯಾ ಟುಡೆ ಪತ್ರಿಕೆ ಎಸ್.ಎಂ.ಕೃಷ್ಣ ಅವರನ್ನು ದೇಶದ ನಂ.1 ಮುಖ್ಯಮಂತ್ರಿ ಎಂದು ಬಣ್ಣಿಸಿತ್ತು ಎಂದು ಹೇಳಿದರು. ಕೃಷ್ಣ ಅವರ ತಂದೆ ಮಲ್ಲಯ್ಯನವರು ವಿದ್ಯಾರ್ಥಿ ಗಳಿಗೆ ಮಂಡ್ಯದಲ್ಲಿ ಹಾಸ್ಟೆಲ್ ನಿರ್ಮಿಸಿದ್ದರು ಎಂದು ಹೇಳಿದರು. ಇಂದು ಸದನದ ಕಲಾಪವಿಲ್ಲ
ಸುವರ್ಣ ವಿಧಾನಸೌಧ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ ಹಿನ್ನೆಲೆಯಲ್ಲಿ ಬುಧವಾರ ಸರ್ಕಾರಿ ರಜೆ ಘೋಷಿಸಿದ್ದು, ವಿಧಾನ ಮಂಡಲದ ಕಲಾಪಗಳು ನಡೆಯುವುದಿಲ್ಲ. ಗುರುವಾರ ಎಂದಿನಂತೆ ನಡೆಯಲಿದೆ. ಆದರೆ, ಶುಕ್ರವಾರ ಇಡೀ ದಿನ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಆಡಳಿತ ಹಾಗೂ ವಿಪಕ್ಷದ ನಾಯಕರು ಭಾಗವಹಿಸಿದ್ದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶನಿವಾರವೂ ಕಲಾಪ ನಡೆಸುವಂತೆ ಸಭೆಯಲ್ಲಿ ಸಲಹೆ ವ್ಯಕ್ತವಾಯಿತು. ಆದರೆ, ಬಹುತೇಕರು ಇದಕ್ಕೆ ಅಸಮ್ಮತಿ ಸೂಚಿಸಿದರು. ಬೇಕಿದ್ದರೆ ರಾತ್ರಿ ಹತ್ತು ಗಂಟೆಯವರೆಗೂ ಕಲಾಪ ನಡೆಸೋಣ. ಆದರೆ, ಶನಿವಾರ ಬೇಡ ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.