ಮುಂಬಯಿ: ಸ್ಪರ್ಧಾತ್ಮಕ ಮನೋ ಭಾವವೇ ನಮ್ಮ ಯಶಸ್ಸಿನ ತಳಹದಿಯಾಗಿದ್ದು, ಮಕ್ಕಳು ತಮ್ಮ ಕಿರುವಯಸ್ಸಿನಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಅಭಿರುಚಿಯನ್ನು ಗುರುತಿಸಿ ಅವರನ್ನು ಬೆಳೆಸುವುದು ಪಾಲಕರು ಹಾಗೂ ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಡಿ. ಎ. ಕಡೋಲಿ ಅವರು ನುಡಿದರು.
ಅಂಬರ್‌ನಾಥ್ ಶಿವಂ ಮಂಗಲ ಕಾರ್ಯಾಲಯದಲ್ಲಿ ಅಂಬರ್‌ನಾಥ್ ಕನ್ನಡ ಮಾಜಿ ವಿದ್ಯಾರ್ಥಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪಾರಿತೋಷಕ ವಿತರಣ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಸೊಲೇ ಗೆಲುವಿನ ಸೋಪಾನ ಎಂಬುದನ್ನು ಮರೆಯಬಾರದು. ಅಂಬರ್‌ನಾಥ್ ಕನ್ನಡ ಮಾಜಿ ವಿದ್ಯಾರ್ಥಿ ಸಂಸ್ಥೆಯು ಇನ್ನಷ್ಟು ಕನ್ನಡ ನಾಡು-ನುಡಿಯ ಸೇವೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ವೈಭವ ಸಂಸ್ಥೆಯ ಎಚ್. ಆರ್. ಚಲವಾದಿ ಮಾತನಾಡಿ, ಕನ್ನಡಿಗರಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದ್ದು, ನಮ್ಮ ಒಗ್ಗಟ್ಟು ಹಾಗೂ ಸಾಧಿಸುವ ಛಲ ಇದ್ದರೆ ನಾವು ಏನನ್ನಾದರೂ ಸಾಧಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಮಲ್ಲಿನಾಥ ಜಲದೆ ಅವರು ಮಾತನಾಡಿ, ಅಂಬರ್‌ನಾಥ್ ಕನ್ನಡ ಮಾಜಿ ವಿದ್ಯಾರ್ಥಿಗಳ ಕನ್ನಡಾಭಿಮಾನ, ಕನ್ನಡದ ಬಡ ವಿದ್ಯಾರ್ಥಿಗಳ ಬಗ್ಗೆ ಅವರು ಇಟ್ಟು ಕಳಕಳಿ ಅಪಾರವಾಗಿದ್ದು, ಈ ಸಂಸ್ಥೆ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿ ಕನ್ನಡ ನಾಡು-ನುಡಿಯ ಸೇವೆಗೈಯಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ಬಹುಮಾನವನ್ನಿತ್ತು ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ದತ್ತಾ ಕೆಂಭಾವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಯೋಜನೆ ಹಾಗೂ ಯೋಚನೆಗಳನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ¾ಕಿ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಗಣ್ಯರಾದ ಎ. ಕೆ. ಹೊನ್ನಳ್ಳಿ, ಕರುಣಾ ಜಲದೆ, ಸದಾನಂದ ಚಲವಾದಿ, ಪದ್ಮಜಾ ಪಾಶ್ಚಾಪುರ, ಆರ್. ಎ. ರಾಜೂರ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರ್ವಹಿಸಿದರು. ಬಿ. ಎ. ರಮೇಶ್ ಅವರು ವಂದಿಸಿದರು. ಸಂಸ್ಥೆಯ ಸದಸ್ಯೆ ಸರಸ್ವತಿ ಉಪ್ಪಾರ ಬಹುಮಾನ ವಿತರಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳಿಂದ ನೃತ್ಯರೂಪಕ, ನಾಟಕ, ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮ ಜರಗಿತು.