ಹೈದರಾಬಾದ್: ಟೀಮ್ ಇಂಡಿಯಾ 2-1 ಅಂತರದಲ್ಲಿ ಆಸೀಸ್ ವಿರುದ್ಧದ ಟಿ-20 ಸರಣಿಯನ್ನು ವಶಪಡಿಸಿಕೊಂಡು, ಟಿ-20 ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆಸಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸೇರಿದಂತೆ ಟೀಮ್ ಇಂಡಿಯಾದ ಹಲವು ಆಟಗಾರರು ತಮ್ಮ ಕಳಪೆ ಫಾರ್ಮ್ ನಿಂದ ಕಂಬ್ಯಾಕ್ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ಈ ಮೂಲಕ ಭರ್ಜರಿ ತಯಾರಿ ನಡೆಸಿದೆ.
ಆಸೀಸ್ ವಿರುದ್ಧದ ಟಿ-20 ಸರಣಿಯ ಗೆಲುವಿಗೆ ಪ್ರಮುಖ ಪಾತ್ರವಹಿಸಿದವರಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಒಬ್ಬರು. ಒಟ್ಟು ಮೂರು ಪಂದ್ಯಗಳಲ್ಲಿ ಸೂರ್ಯ ಮೊದಲ ಪಂದ್ಯದಲ್ಲಿ 46 ರನ್ ಗಳಿಸಿದ್ದರು. 8 ಓವರ್ ನ ಎರಡನೇ ಪಂದ್ಯದಲ್ಲಿ ರನ್ ಗಳಿಸದೇ ಔಟಾದರು. ಭಾನುವಾರ ( ಸೆ. 25 ರಂದು) ನಡೆದ ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ 5 ಬೌಂಡರಿ, 5 ಸಿಕ್ಸರ್ ಸಹಿತ 69 ರನ್ ಗಳಿಸಿದ್ದರು.
ಏಷ್ಯಾಕಪ್ ನಿಂದಲೂ ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರ ಆಟದ ಬಗ್ಗೆ ಖ್ಯಾತನಾಮ ಕ್ರಿಕೆಟರ್, ಮಾಜಿ ಆಟಗಾರರು ಪ್ರಶಂಸೆಯನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಕ್ರಿಕೆಟಿಗನೊಬ್ಬ ಪ್ರಶಂಸೆ ಮಾಡುವ ಭರದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ವರ್ನಾನ್ ಫಿಲಾಂಡರ್ ಸೂರ್ಯಕುಮಾರ್ ಅವರು ಆಸೀಸ್ ವಿರುದ್ದದ ಮೂರನೇ ಟಿ-20 ಯಲ್ಲಿ ಸ್ಫೋಟಕ ಆಟದ ಬಗ್ಗೆ “ಈ ಮಗು ಆಡಬಹುದು. ಇವರ ಆಟ ನೋಡಲು ರೋಮಾಂಚನವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಇವರ ಟ್ವೀಟ್ ಗೆ ನೆಟ್ಟಿಗರು ಟ್ರೋಲ್ ಮಾಡಿದ್ದು, ಬಳಕೆದಾರರೊಬ್ಬರು “ಮಗು ನಿಮಗಿಂತ ಕೇವಲ 5 ವರ್ಷ ಚಿಕ್ಕವನು” ಎಂದಿದ್ದಾರೆ. ಮತ್ತೊಬ್ಬರು “ಇವರು 32 ವರ್ಷದ ಮಗು” ಎಂದಿದ್ದಾರೆ.
ಟೀಮ್ ಇಂಡಿಯಾ ಸೆ.28 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ-20 ಸರಣಿಯನ್ನು ಆಡಲಿದೆ.