Advertisement

ಅಪ್ಪ ಹೊಲದಲ್ಲಿ ; ಮಗ ಚಿನ್ನದ ಬೇಟೆಯಲ್ಲಿ ! ಸಾಲ ಮಾಡಿ ಕಲಿತ ಪದವಿಗೆ ಸಿಕ್ತು 14 ಚಿನ್ನ

09:28 PM Apr 06, 2021 | Team Udayavani |

ಬಾಗಲಕೋಟೆ : ಪುಟ್ಟ ಹಳ್ಳಿಯಲ್ಲಿ ಅಪ್ಪ ಹೊಲದಲ್ಲಿ ಹಸು ನೋಡಿಕೊಳ್ಳುತ್ತ ಕೃಷಿಯಲ್ಲಿ ತೊಡಗಿದ್ದರೆ, ಇತ್ತ ಮಗ ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡುತ್ತಿದ್ದ. ಈ ಅದ್ಭುತ ಘಳಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ತಾಯಿ-ಅಜ್ಜ ಆನಂದದ ಕಣ್ಣೀರು ಹೊರ ಹಾಕಿದರು…

Advertisement

ಹೌದು, ಇಂತಹ ವಿಶೇಷ ಸನ್ನಿವೇಶ ಕಂಡದ್ದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕುನೂರ ಎಂಬ ಪುಟ್ಟ ಹಳ್ಳಿಯ ರೈತ ವೆಂಕಟೇಶ ಮತ್ತು ತಾಯಿ ವಸಂತ ಅವರ ದ್ವಿತೀಯ ಪುತ್ರ ಪ್ರಶಾಂತ ವಿ, ತೋಟಗಾರಿಕೆ ವಿವಿಯ 2020-2021ನೇ ಸಾಲಿನ ಚಿನ್ನದ ಹುಡುಗನಾಗಿ ಹೊರ ಹೊಮ್ಮಿದ.

ಅಪ್ಪ ಹೊಲದಲ್ಲಿ-ಪುತ್ರ ಚಿನ್ನದ ಬೇಟೆಯಲ್ಲಿ :
ಸಾಲಸೋಲ ಮಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ತಂದೆ-ತಾಯಿ, ಆ ಮಕ್ಕಳು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿದಾಗ ಸ್ವತಃ ಹಾಜರಾಗಿ ಸಂಭ್ರಮಿಸುವುದು ಪರಂಪರೆ. ಆದರೆ, ಈ ಯುವ ರೈತನೂ ಎನಿಸಿಕೊಂಡಿರುವ ಪ್ರಶಾಂತ ಅವರ ತಂದೆ, ಮಂಗಳವಾರದ ಪದವಿ ಪ್ರದಾನ ಸಮಾರಂಭಕ್ಕೆ ಬಂದಿರಲಿಲ್ಲ. ಕಾರಣ, ಹೊಲದಲ್ಲಿ ಹಸು ಸಾಕಿದ್ದು ಅವುಗಳ ಉಸ್ತುವಾರಿ ಜತೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಪದವಿ ಪಡೆಯಲು ಪ್ರಶಾಂತನ ಜತೆಗೆ ತಾಯಿ ವಸಂತ ಹಾಗೂ ಅಜ್ಜ ಚನ್ನೇಗೌಡ ಅವರೊಂದಿಗೆ ಬಂದಿದ್ದ. ಈ ಸಂಭ್ರಮದಲ್ಲಿ ತಂದೆ ಅನಿವಾರ್ಯವಾಗಿ ಭಾಗಿಯಾಗಲು ಆಗದ ಕೊರಗಿದ್ದರೂ, ತನ್ನ ಹೆತ್ತ ತಾಯಿ-ಪ್ರೀತಿಯಿಂದ ನೋಡಿಕೊಳ್ಳುವ ಅಜ್ಜನ ಕೊರಳಿಗೆ ತಾನು ಪಡೆದ 14 ಚಿನ್ನದ ಪದಕ ಹಾಕುವ ಮೂಲಕ ಪ್ರಶಾಂತ ಸಂತಸ ಹಂಚಿಕೊಂಡ.

ಅಪ್ಪಟ ಕೃಷಿಕರು:
ತೋಟಗಾರಿಕೆ ವಿವಿಯ ಮೈಸೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ಅತಿಹೆಚ್ಚು ಅಂಕ ಪಡೆಯುವ ಮೂಲಕ ಇಡೀ ವಿಶ್ವ ವಿದ್ಯಾಲಯಕ್ಕೆ ಮೊದಲ ರ್‍ಯಾಂಕ್ ಪಡೆದ ಪ್ರಶಾಂತ, ಒಟ್ಟು 14 ಚಿನ್ನದ ಪದಕ ಬಾಚಿಕೊಂಡರು. ಪ್ರಶಾಂತ ಅವರ ತಾಯಿ-ತಂದೆ ಇಬ್ಬರೂ ಅಪ್ಪಟ ಕೃಷಿಕರು ಎಂಬುದು ವಿಶೇಷ.

Advertisement

ತೋಟಗಾರಿಕೆ ವಿವಿಯ ಪ್ರತಿ ಬಾರಿಯ ಘಟಿಕೋತ್ಸವದಲ್ಲಿ ಅತಿಹೆಚ್ಚು ಚಿನ್ನದ ಪದಕ ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಾಲಕಿಯರೇ ಈ ವರೆಗೆ ಮುಂದಿದ್ದರು. ಅದರಲ್ಲೂ ಶಿಕ್ಷಕರ ಮಕ್ಕಳು, ಖಾಸಗಿ ಕಂಪನಿಗಳ ನೌಕರರ ಮಕ್ಕಳು ಹೆಚ್ಚು ಚಿನ್ನದ ಪದಕ ಪಡೆಯುತ್ತಿದ್ದರು. ಈ ಬಾರಿ ಅಪ್ಪಟ ಕೃಷಿ ಕುಟುಂಬದ ಪ್ರಶಾಂತ 14 ಚಿನ್ನದ ಪದಕ ಬಾಚಿಕೊಂಡಿದ್ದು ವಿಶೇಷ.

ಪ್ರಶಾಂತ ಅವರ ತಂದೆ ವೆಂಕಟೇಶ ಮತ್ತು ತಾಯಿ ವಸಂತ ಅವರು, ಕುನೂರಿನಲ್ಲಿ 2 ಎಕರೆ ಭೂಮಿ ಇದೆ. ಅದರಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಜತೆಗೆ ಹೈನುಗಾರಿಕೆಯೂ ಅವರ ಉಪ ಕಸಬು. ಇಬ್ಬರು ಮಕ್ಕಳೂ ತಂದೆಗೆ ಕೃಷಿ ಜತೆಗೆ ಸಹಕಾರ ನೀಡುವ ಜತೆಗೆ ತೋಟಗಾರಿಕೆ ಪದವಿ ಅಧ್ಯಯನದಲ್ಲೇ ತೊಡಗಿದ್ದಾರೆ. ಮೊದಲ ಮಗ ಪ್ರಶಾಂತ, 14 ಚಿನ್ನದ ಪದಕ ಪಡೆದಿದ್ದು ಕಂಡು ತಾಯಿ ವಸಂತ, ಆನಂದದ ಕಣ್ಣೀರು ಹಾಕಿ, ಮಗನಿಗೆ ಮುತ್ತಿಕ್ಕಿ ಸಂಭ್ರಮಿಸಿದರು.

ಸಾಲ ಮಾಡಿ ಶಾಲೆ ಕಲಿತ ಹುಡುಗ :
ಪ್ರಶಾಂತ, 1ರಿಂದ 6ನೇ ತರಗತಿ ವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು, ಬಳಿಕ ಪಿಯುಸಿ ವರೆಗೆ ಕನಕಪುರದಲ್ಲಿ ಕರಿಯಪ್ಪ ಅವರು ಸ್ಥಾಪಿಸಿದ ಗ್ರಾಮ ವಿದ್ಯಾ ಪ್ರಚಾರಕ ಸಂಘದ ಶಾಲೆ-ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ 91.84 ಅಂಕ ಪಡೆದಿದ್ದರೆ, ಪಿಯುಸಿಯಲ್ಲಿ ಶೇ.93.85 ಅಂಕ ಪಡೆದಿದ್ದಾರೆ.

ಪ್ರಶಾಂತ ತನ್ನ ಪದವಿ ವ್ಯಾಸಂಗಕ್ಕಾಗಿ ರಾಮನಗರ ಜಿಲ್ಲೆಯ ಬೇಕುಪ್ಪೆ ಶಾಖೆಯ ಯೂನಿಯನ್ ಬ್ಯಾಂಕ್‌ನಲ್ಲಿ ಒಟ್ಟು 2.40 ಲಕ್ಷ ಸಾಲ ಮಾಡಿದ್ದಾರೆ. ಮುಂದೆ ಕೃಷಿ ವಿಜ್ಞಾನಿಯಾಗಿ, ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸುವ ಗುರಿಯೂ ಹೊಂದಿದ್ದಾರೆ. ಸಧ್ಯ ಬೆಂಗಳೂರಿನ ಜಿಕೆವಿಕೆಯಲ್ಲಿ ಅನುವಂಶೀಯ ಸಸ್ಯ ತಳಿ ಅಭಿವೃದ್ಧಿ ವಿಷಯದಲ್ಲಿ ಎಂಎಸ್ಸಿ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ರೈತರು ಪಾರಂಪರಿಕ ಒಂದೇ ಕೃಷಿ ಮಾಡುತ್ತಿದ್ದು, ಇದರಿಂದ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಬಹುಪದ್ಧತಿ ಮಾಡಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೃಷಿ ವಿಜ್ಞಾನಿ ಆಗಬೇಕು ಎಂಬುದು ನನ್ನ ಗುರಿ. ನಾನು ಚಿಕ್ಕಂದಿನಿಂದಲೂ ಹೊಲದಲ್ಲಿ ಗಿಡ-ಮರ-ಬೆಳೆಗಳೊಂದಿಗೆ ಬೆಳೆದವನು. ಹೀಗಾಗಿ ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ ಅತಿಹೆಚ್ಚು ಚಿನ್ನದ ಪದಕ ಪಡೆಯಲು, ವಿವಿಗೆ ರ್‍ಯಾಂಕ್ ಪಡೆಯಲು ಅನುಕೂಲವಾಯಿತು.
-ಪ್ರಶಾಂತ ವಿ, 14 ಚಿನ್ನದ ಪದಕ ಪಡೆದ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next