ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ನೀಡಲಾಗಿದ್ದ ಭದ್ರತೆ ಹೆಚ್ಚಿಸಿ ಪಾಕ್ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ತನ್ನನ್ನು ಸಾಯಿಸಲು ದೇಶದೊಳಗೆ ಮಾತ್ರವಲ್ಲದೇ ವಿದೇಶದಲ್ಲೂ ಸಂಚು ರೂಪಿಸಲಾಗುತ್ತಿದೆ ಎಂದು ಇಮ್ರಾನ್ ಆರೋಪಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಈ ಸಂಚಿನ ಬಗ್ಗೆ ಮಾತನಾಡಿದ್ದ ಇಮ್ರಾನ್, “ನನಗೇನಾದರೂ ಆದರೆ ನಾನು ಈಗಾಗಲೇ ರೆಕಾರ್ಡ್ ಮಾಡಿಟ್ಟಿರುವ ವಿಡಿಯೋ ನೋಡಿ. ಅದರಲ್ಲಿ ಯಾರು ಈ ಸಂಚು ಮಾಡಿದ್ದಾರೆನ್ನುವ ಮಾಹಿತಿ ಇದೆ’ ಎಂದಿದ್ದರು. ಆ ಹಿನ್ನೆಲೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವಾಲಯದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಭದ್ರತೆ ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ. ಇಮ್ರಾನ್ ಮನೆಯ ಬಳಿ 94 ಭದ್ರತಾ ಸಿಬ್ಬಂದಿ, 26 ಅಧಿಕಾರಿಗಳು ಮತ್ತು 9 ಯೋಧರನ್ನು ನಿಯೋಜಿಸಲಾಗಿದೆ.
ಅಮೆರಿಕ ವಿರುದ್ಧ ಕಿಡಿ:
ಭಾನುವಾರ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ ರ್‍ಯಾಲಿ ನಡೆಸಿದ ಇಮ್ರಾನ್ ಖಾನ್, ಅಮೆರಿಕ ವಿರುದ್ಧದ ವಾಗ್ಧಾಳಿ ಮುಂದುವರಿಸಿದ್ದಾರೆ. “ಅಮೆರಿಕವು ಪಾಕ್ ಮೇಲೆ ಆಕ್ರಮಣ ಮಾಡದೆಯೇ ಪಾಕಿಸ್ತಾನವನ್ನು ಜೀತದಾಳನ್ನಾಗಿ ಮಾಡಿಕೊಂಡಿದೆ’ ಎಂದಿದ್ದಾರೆ.