Advertisement

ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್‌ ಸಿಬ್ಬಂದಿ

09:32 AM May 28, 2022 | Team Udayavani |

ಬೆಂಗಳೂರು: ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ದಾಳಿಯ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡುತ್ತಿದ್ದ ಮಾಜಿ ಪೊಲೀಸ್‌ ಸಿಬ್ಬಂದಿ ಸೇರಿ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಬೆಳಗಾವಿ ಚಿಕ್ಕೋಡಿ ತಾಲೂಕಿನ ಮುರಿಗೆಪ್ಪಾ ನಿಂಗಪ್ಪ ಕುಂಬಾರ (56) ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಜನಿಕಾಂತ್‌ (46) ಬಂಧಿತರು. ಆರೋಪಿ ಗಳಿಂದ ಹತ್ತಾರು ಸಿಮ್‌ಕಾರ್ಡ್‌ಗಳು ಮತ್ತು ಮೊಬೈಲ್‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ಆರೋಪಿಗಳು ಇತ್ತೀಚೆಗೆ ಡಿವೈಎಸ್ಪಿ ಹೆಸರಿನಲ್ಲಿ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಧನಂಜಯ್‌ ಹಾಗೂ ಇಬ್ಬರು ಸಹೋದ್ಯೋಗಿಗಳಿಗೆ ಕರೆ ಮಾಡಿ, ರಾಜ್ಯದ ಕೆಲ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಮ್ಮ ಮೇಲೆ ದೂರು ನೀಡಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ಸಮೀಕ್ಷೆ ಮಾಡುತ್ತಿದ್ದೇವೆ. ಸದ್ಯದಲ್ಲೇ ನಿಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಿದ್ದೇವೆ’ ಎಂದು ಬೆದರಿಸಿದ್ದರು.

ಅಲ್ಲದೆ, “ನಿಮ್ಮ ಮೇಲೆ ದಾಳಿ ನಡೆಯದಂತೆ ನೋಡಿಕೊಳ್ಳುತ್ತೇನೆ. ಸದ್ಯ ನಮ್ಮ ತನಿಖಾಧಿಕಾರಿ ಹಾಗೂ ಇತರರು, ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಅದಕ್ಕೆ ಹಣದ ವ್ಯವಸ್ಥೆ ಮಾಡಿಸಿ’ ಎಂದು ಬೇಡಿಕೆ ಇಟ್ಟಿದ್ದರು. ನಂತರ ಶಿಕ್ಷಣ ಸಚಿವರ ಆಪ್ತ ಸಹಾಯಕರು ತಮ್ಮ ಎಡಿಜಿಪಿ ಜತೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಕಚೇರಿಗೆ ಬರ ಬೇಡಿ ಎಂದೆಲ್ಲ ಹೆದರಿಸಿದ್ದರು. ಈ ಸಂಬಂಧ ಧನಂಜಯ್‌ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಎಸಿಬಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ:ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

Advertisement

ಮಾಜಿ ಪೊಲೀಸ್ಸಿಬ್ಬಂದಿ

ಆರೋಪಿಗಳ ಪೈಕಿ ರಂಜನಿಕಾಂತ್‌ ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಕರ್ತವ್ಯಲೋಪದ ಆರೋಪದ ಮೇಲೆ ವಜಾಗೊಂಡಿದ್ದಾನೆ. ನಂತರ ಹಣದ ಆಗತ್ಯತೆಗಾಗಿ ಮುರಿಗೆಪ್ಪಾ ಜತೆ ಸೇರಿಕೊಂಡು ಈ ರೀತಿಯ ಕೃತ್ಯ ನಡೆಸುತ್ತಿದ್ದಾನೆ. ಮುರೆಗೆಪ್ಪಾನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಇದೇ ರೀತಿಯ 40 ಪ್ರಕರಣಗಳು ದಾಖಲಾಗಿವೆ. ರಜನಿಕಾಂತ್‌ ವಿರುದ್ಧ 6 ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳು ತನಿಖೆಯಲ್ಲಿದ್ದು, ಕೆಲ ಪ್ರಕರಣಗಳಲ್ಲಿ ಕೋರ್ಟ್‌ ವಾರೆಂಟ್‌ ಹೊರಡಿಸಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದಿದ್ದಾರೆ.

ವಿವಿಧ ಖಾತೆಗೆ ಹಣ ಜಮೆ

ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಫೋನ್‌ ಕರೆ ಮಾಡುವ ಆರೋ ಪಿಗಳು, ಹೆದರಿದ ಸರ್ಕಾರಿ ಅಧಿಕಾರಿಗಳಿಂದ ತಮಗೆ ಪರಿಚಯವಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಮಾಡಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next