ಕಾರವಾರ: ಪಿಡಿಒ ವರ್ಗಾವಣೆ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಳಿ ಚರ್ಚಿಸಲು ಬಂದ ಮಾಜಿ ಶಾಸಕ ಸತೀಶ್ ಸೈಲ್, ಹಾಲಿ ಶಾಸಕಿ ರೂಪಾಲಿ ನಾಯ್ಕ ಜೊತೆ ಮಾತಿನ ವಾಗ್ವಾದ ನಡೆದ ಘಟನೆ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದಿದೆ.
ಮಾಜಾಳಿ ಪಂಚಾಯತ್ ಪಿಡಿಒ ಸಾಧನ ಚೆಂಡೇಕರ್ ಅವರನ್ನು ವರ್ಗಾಯಿಸಿ ಅವರ ಸ್ಥಳಕ್ಕೆ ಪಿಡಿಒ ಅರುಣಾ ಎಂಬುವವರನ್ನು ಸಿಇಒ ಈಶ್ವರ ಕಾಂದೂ ಆದೇಶ ಹೊರಡಿಸಿದ್ದರು. ಅರುಣಾ ಅವರು ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಕೊಂಕಣಿ ಬರುವುದಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಈ ವರ್ಗಾವಣೆ ರದ್ದು ಮಾಡಿ, ಸಾಧನಾ ಅವರನ್ನೇ ಮರು ನೇಮಕಕ್ಕೆ ಒತ್ತಾಯಿಸಲು ಮಾಜಿ ಶಾಸಕ ಸೈಲ್ ಬಂದಿದ್ದರು.
ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲಾ ಸಭೆಗಾಗಿ ಆಗಮಿಸಿ, ಸಿಇಒ ಬಳಿ ಚರ್ಚಿಸುತ್ತಿದ್ದರು. ಇದನ್ನು ಗಮನಿಸಿದ ಮಾಜಿ ಶಾಸಕ ಸತೀಶ್ ಸೈಲ್ ಅವರು ನಾನು ಮೊದಲು ಜಿಲ್ಲಾ ಪಂಚಾಯತ್‌ಗೆ ಬಂದಿದ್ದೇನೆ. ನನ್ನ ಅಹವಾಲು ಮೊದಲು ಕೇಳಬೇಕೆಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಬಳಿ ಮಾತಿಗೆ ಇಳಿದರು. ಪ್ರೋಟೋಕಾಲ್ ಪ್ರಕಾರ ಹಾಲಿ ಶಾಸಕರಿಗೆ ಮೊದಲ ಆದ್ಯತೆ, ಅವರೊಂದಿಗೆ ಚರ್ಚಿಸಿ ನಿಮ್ಮನ್ನು ಕರೆಯುವೆ ಎಂದರೂ, ಮಾತಿನ ಚಕಮಕಿ ಆರಂಭವಾಯಿತು. ಆಗ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಮಧ್ಯೆ ಮಾತಿನ ಜಟಾಪಟಿ ಆರಂಭವಾಗಿದೆ.
ಶಾಸಕಿ ರೂಪಾಲಿ ನಾಯ್ಕ ಯಾಕ್ರಿ ಏಕವಚನದಲ್ಲಿ ಮಾತಾಡುವಿರಿ? ಕುಡಿದು ಬಂದಿದ್ದೀರಾ ? ಮಹಿಳೆ ಎಂಬ ಗೌರವ ಬೇಡವೇ ಎಂದಾಗ, ನಿಮ್ಮಪ್ಪ ನನಗೆ ಕುಡಿಯಲು ದುಡ್ಡು ಕೊಟ್ಟಿಲ್ಲ, ನೀ ನನ್ನ ಒಳಗೆ ಹಾಕಿಸುವೆಯಾ, ಪೇಪರ್ ವೇಟ್ ನಿಂದ ಹಲ್ಲೆ ಮಾಡಲು ಬರುವೆಯಾ ಎಂದು ರಂಪ ಮಾಡಿದ್ದಾರೆ. ಇದಕ್ಕೆ ಶಾಸಕಿ ರೂಪಾಲಿ ನಾಯ್ಕ ಸಹ ಸಭೆ ನಡೆಯುವಾಗ ಒಳಗೆ ನುಗ್ಗಿ ಗಲಾಟೆ ಮಾಡುವಿರಾ? ಏಕ ವಚನದಲ್ಲಿ ಶಾಸಕಿಯನ್ನು ಕರೆಯುವಿರಾ ಎಂದು ಕೂಗಾಡಿದ್ದಾರೆ. ಪ್ರಕರಣ ವಿಕೋಪಕ್ಕೆ ಹೋಗುವುದನ್ನು ಪೊಲೀಸರು ತಡೆದಿದ್ದಾರೆ. ಶಾಸಕಿಗೆ ನೀನು ನನ್ನ ಒಳಗೆ ಹಾಕಿಸುವೆಯಾ, ನಿಮ್ಮ ಅಪ್ಪ ನನಗೆ ಕುಡಿಯಲು ದುಡ್ಡು ಕೊಡ್ತಾನಾ ಎಂಬ ವಿಡಿಯೋ ತುಣುಕು ಹರಿದಾಡತೊಡಗಿದೆ.
Related Articles
ಪೊಲೀಸ್ ಠಾಣೆಯಲ್ಲಿ ದೂರು
ಪೊಲೀಸ್ ಠಾಣೆಗೆ ತೆರಳಿದ ಮಾಜಿ ಶಾಸಕ ಸೈಲ್ ನನ್ನ ಮೇಲೆ ಪೇಪರ್ ವೇಟ್ ನಿಂದ ಹಲ್ಲೆಗೆ ಯತ್ನಿಸಿದರು ಎಂದು ದೂರು ನೀಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಶಾಸಕಿ ನಿಂದಿಸಿದರು ಎಂದು ಹೇಳಿದ್ದಾರೆ. ಅಲ್ಲದೇ ಕಾರವಾರ ನಗರ ಠಾಣೆಯ ಬಾಗಿಲಲ್ಲಿ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಅವರ ಜೊತೆ ಮಾಜಿ ಶಾಸಕರು ಕುಳಿತು ವಿವಾದ ಕಿಡಿ ಎಬ್ಬಿಸಿದ್ದಾರೆ. ಎವಿಡೆನ್ಸ್ ಆಕ್ಟ್ ಎಸ್‌ಸಿ 76 ಅಡಿ ಸಿಸಿ ಕ್ಯಾಮರಾ ದೃಶ್ಯಗಳನ್ನು ನೀಡುವಂತೆ ಜಿಲ್ಲಾ ಪಂಚಾಯತ್‌ಗೆ ಕೋರಿದ್ದಾರೆ.
ಪ್ರತಿ ದೂರು ದಾಖಲು
ಇದಕ್ಕೆ ಪ್ರತಿಯಾಗಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಬೆಂಬಲಿಗರು ಠಾಣೆಗೆ ಆಗಮಿಸಿ ಪ್ರತಿದೂರು ನೀಡಿದ್ದಾರೆ. ಮಹಿಳಾ ಶಾಸಕಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆಂದು, ಅವರ ಮೇಲೆ ಜನಪ್ರತಿನಿಧಿ ಮೇಲೆ ಹಲ್ಲೆ ಯತ್ನದ ದೂರು ದಾಖಲಿಸಬೇಕೆಂದು ಡಿವೈಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ. ಮಾಧ್ಯಮಗಳಿಗೆ ಕಾಂಗ್ರೆಸ್ ನೀಡಿದ ವಿಡಿಯೋ ತುಣಕಿನಲ್ಲಿ ಶಾಸಕ ಸೈಲ್ , ನನ್ನ ಒಳಗೆ ಹಾಕಿಸುವೆಯಾ, ನಿಮ್ಮಪ್ಪ ನನಗೆ ಕುಡಿಯಲು ದುಡ್ಡು ಕೊಡ್ತಾನಾ ಎಂಬ ಮಾತುಗಳು ಮಾತ್ರ ಕೇಳಿಸುತ್ತಿವೆ.