ಸೊರಬ: ಎಡಬಿಡದೇ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸುವ ಜೊತೆಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಒತ್ತಾಯಿಸಿದರು.
ತಾಲೂಕಿನ ಚಿಕ್ಕಾವಲಿ ಗ್ರಾಮದಲ್ಲಿ ಕಟಾವು ಮಾಡಿದ ಮುಸುಕಿನ ಜೋಳದ ಬೆಳೆ ಮಳೆಯಿಂದ ಮೊಳಕೆಯೊಡೆದಿರುವುದನ್ನು ಪರಿಶೀಲಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರ ಕೈ ಸೇರುವ ಹೊಸ್ತಿಲಲ್ಲಿದ್ದ ಭತ್ತ, ಮೆಕ್ಕೆ ಜೋಳ ಮೊಳಕೆಯೊಡೆಯುತ್ತಿವೆ. ಕಟಾವಿಗೆ ಬಂದಿದ್ದ ಭತ್ತ ಧರೆಗೆ ಉರುಳಿ ಸಂಪೂರ್ಣ ಹಾಳಾಗಿರುವುದು ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಕಂಡಿದ್ದೇನೆ. ಇದು ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳಾದ ಬಾಳೆ, ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಮಳೆಯಿಂದ ಹಾನಿಗೀಡಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸುವ ಇಚ್ಛಾಶಕ್ತಿ ತೋರಬೇಕು ಎಂದರು.
ಕೃಷಿ ಇಲಾಖೆಯ ಮಾಹಿತಿಯಂತೆ ಕ್ಷೇತ್ರದಲ್ಲಿ ಈವರೆಗೆ ಸುಮಾರು 321 ಎಕರೆ ಪ್ರದೇಶದಲ್ಲಿ ಬೆಳೆದ 8775 ಕ್ವಿಂಟಾಲ್ ಭತ್ತ, ಸುಮಾರು 1290 ಎಕರೆ ಪ್ರದೇಶದಲ್ಲಿ ಬೆಳೆದ 32,250 ಕ್ವಿಂಟಾಲ್ ಮುಸುಕಿನ ಜೋಳ ಹಾಗೂ ಜಮೀನಿನಲ್ಲಿ ಕಟಾವು ಆಗದೇ ಇರುವ ಮೊಳಕೆ ಬಂದು 321 ಎಕರೆ ಪ್ರದೇಶದ ಭತ್ತ ಮತ್ತು 3110 ಎಕರೆ ಪ್ರದೇಶದ ಮುಸುಕಿನ ಜೋಳದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಸುಮಾರು 2.73 ಕೋಟಿ ರೂ., ಬೆಳೆ ನಷ್ಟವಾಗಿದೆ. ರೈತರು ಅತಿವೃಷ್ಟಿ-ಅನಾವೃಷ್ಟಿಯಿಂದ ಸಾಕಷ್ಟು ಆರ್ಥಿಕ ನಷ್ಟು ಅನುಭವಿಸಿದ್ದಾರೆ. ಜವಾಬ್ದಾರಿಯುತ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಕೂಡಲೇ ಸೂಕ್ತ ಪರಿಹಾರ ಧನವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಪ್ಪಗಡ್ಡೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ. ರಾಜಶೇಖರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.