ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಬಿಜೆಪಿ “ಗಾಳ’ ಹಾಕಿದೆ. ಎಂ.ಆರ್.ಸೀತಾರಾಂ ಅವ ರನ್ನು ಬಿಜೆಪಿಗೆ ಸೆಳೆದು ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದು ಈಗಾಗಲೇ “ಆಫರ್’ ನೀಡಲಾಗಿದೆ.
ಬಲಿಜ ಸಮುದಾಯದ ಪ್ರಭಾವಿ ಮುಖಂಡರೂ ಆಗಿರುವ ಎಂ.ಆರ್.ಸೀತಾರಾಂ ಅವರನ್ನು ಪಕ್ಷಕ್ಕೆ ಸೆಳೆದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ಕಾರ್ಯ ತಂತ್ರಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸೀತಾರಾಂ ಒಲವು ಹೊಂದಿದ್ದು, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಅವರು ಸ್ಪರ್ಧೆ ಮಾಡಿದ್ದರಿಂದ ಅವರ ಕನಸು ಭಗ್ನಗೊಂಡಿತ್ತು. ಹೀಗಾಗಿ, ಬಿಜೆಪಿಗೆ ಸೆಳೆದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ.
ಸೀತಾರಾಂ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದರೆ ಅಲ್ಲಿ ಟಿಕೆಟ್ ನೀಡುವುದು ಇಲ್ಲದಿದ್ದರೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಒಪ್ಪಿದರೂ ಟಿಕೆಟ್ ಕೊಡಲು ಬಿಜೆಪಿ ಸಿದ್ಧವಿದೆ. ಆದರೆ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕೆ.ಸಿ.ರಾಮಮೂರ್ತಿ ಸ್ಪರ್ಧೆ ಮಾಡುವ ಸಾಧ್ಯತೆ ಇರುವುದರಿಂದ ಬಹುತೇಕ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗಬಹುದು ಎಂದು ತಿಳಿದು ಬಂದಿದೆ.
ಒಂದೊಮ್ಮೆ ಎಂ.ಆರ್.ಸೀತಾರಾಂ ಅವರು ಬಿಜೆಪಿಗೆ ಸೇರ್ಪಡೆಯಾದರೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಂಚಿತರಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪದಾಧಿಕಾರಿ ಹುದ್ದೆ ಪಡೆದಿರುವ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರೂ ಬಿಜೆಪಿಗೆ ಬರಬಹುದು. ಅವರಿಗೆ ಬಾಗೇಪಲ್ಲಿ ಕ್ಷೇತ್ರದ ವಿಧಾನಸಭೆ ಟಿಕೆಟ್ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.
Related Articles
ಎಂ.ಆರ್.ಸೀತಾರಾಂ ಅವರ ಬಹುತೇಕ ಬೆಂಬಲಿಗರು, ಆಪ್ತರು ಸಹ ಬಿಜೆಪಿ ಸೇರ್ಪಡೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಎಂಕೆ ಸೂತ್ರದಾರ: ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರಷ್ಟೇ ಅಲ್ಲದೆ ಮತ್ತಷ್ಟು ಪ್ರಭಾವಿ ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಗಾಳ ಹಾಕಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೂಲಕ ಮಾತುಕತೆ ನಡೆಸಿ ಪಕ್ಷಕ್ಕೆ ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದ ಪ್ರಭಾವಿ ಮುಖಂಡರಿಗೆ ಬಿಜೆಪಿ ಆಹ್ವಾನ ನೀಡಿದೆ ಎಂದು ಹೇಳಲಾಗಿದೆ.
ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬರಲು ಮಾನಸಿಕವಾಗಿ ಸಿದ್ಧರಿದ್ದವರನ್ನು ಬಿಜೆಪಿಗೆ ಸೆಳೆಯಲು ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ. ಬಿಬಿಎಂಪಿ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಘೋಷಣೆಯಾ ದರೆ ಕೆಲವು ನಾಯಕರ ಸೇರ್ಪಡೆಗೆ ಮಹೂರ್ತ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.
ನಾಯಕರ ಮನವೊಲಿಸುವುದು ಸೂಕ್ತ : ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ರಾಜ್ಯ ನಾಯಕರ ವಿರುದ್ಧ ಬೇಸರಗೊಂಡು ಪ್ರಮುಖ ನಾಯಕರು ನಿರ್ಗಮನದ ಹಾದಿ ಹಿಡಿದಿರುವುದು ಆತಂಕಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಈ ವಿದ್ಯಮಾನಗಳು ಪಕ್ಷದ ಮೇಲೆ ಪರಿಣಾಮ ಬೀರಬಹುದು. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಪಕ್ಷ ಬಿಡಲು ಮುಂದಾಗಿರುವ ಹಾಗೂ ಬೇಸರಗೊಂಡಿರುವ ನಾಯಕರ ಮನವೊಲಿಸಿ ಉಳಿಸಿಕೊಳ್ಳುವುದು ಸೂಕ್ತ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
–ಎಸ್.ಲಕ್ಷ್ಮಿನಾರಾಯಣ