ಇಂಡಿ: ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ನೀರಾವರಿ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯಗಳನ್ನು ನೋಡಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ಹೊಟ್ಟೆಉರಿಯುತ್ತಿದೆ. ಹೀಗಾಗಿ ಗೋವಿಂದ ಕಾರಜೋಳ ಅವರ ವಿರುದ್ಧ ಅಸಂಬದ್ಧ ಹಾಗೂ ಅಪ್ರಭುತ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಹಕಾರಿ ಪ್ರಕೋಸ್ಟ ಸಂಚಾಲಕ ಹನುಮಂತರಾಯಗೌಡ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ. ಪಾಟೀಲರು ಪ್ರಬುದ್ಧರು ಎಂದು ತಿಳಿದುಕೊಂಡಿದ್ದೆವು. ಆದರೆ ಅವರ ಮಾತೇ ಅವರು ಅಪ್ರಬುದ್ಧರು ಎಂದು ತಿಳಿಸಿ ಕೊಡುತ್ತಿದೆ. ಕಾರಜೋಳ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಸಹ ಇಟ್ಟುಕೊಂಡಿಲ್ಲ. ನಿಮ್ಮಿಂದ ಕಾರಜೋಳ ಅವರು ಪಾಠ ಕಲಿಯಬೇಕಿಲ್ಲ. ಅವರ ವಿರುದ್ಧ ಏಕವಚನ ಪದ ಪ್ರಯೋಗ ಮಾಡಿದ್ದು ಎಂ.ಬಿ. ಪಾಟೀಲರಿಗೆ ಶೋಭೆ ತರುವಂಥದ್ದಲ್ಲ ಎಂದರು.
ನೀರಾವರಿ ಯೋಜನೆ ಬಗ್ಗೆ ಕಾರಜೋಳ ಅವರು ಸಾಕಷ್ಟು ಅರಿವು ಹೊಂದಿದ್ದಾರೆ. ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಕಾರಜೋಳರು ಬದ್ಧರಿದ್ದಾರೆ. ಎಂ.ಬಿ. ಪಾಟೀಲ ಅವರು ಮಾಡಿದ ಯೋಜನೆಗಳಿಗಿಂತ ವೇಗವಾಗಿ ಕಾರಜೋಳ ಅವರು ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಕಾರಜೋಳ ಅವರು ಮುಂದಾಗಿದ್ದು ತಮ್ಮ ಹೆಸರು ನೀರಾವರಿಯಲ್ಲಿ ಕಾಣದಂತಾಗುತ್ತದೆ ಎಂದು ಭಯಗೊಂಡು ಎಂ.ಬಿ. ಪಾಟೀಲ ಅವರು ಕಾರಜೋಳ ಅವರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅನಿಲ ಜಮಾದಾರ, ಪುಟ್ಟಣಗೌಡ ಪಾಟೀಲ, ಸಂಜೀವಕುಮಾರ ದಶವಂತ, ರಮೇಶ ಧರೇನವರ, ರಾಜಕುಮಾರ ಯರಗಲ್ ಇದ್ದರು.