Advertisement

ರಣರಂಗದಲ್ಲೇ ಕೆಎಂಶಿ ಕುತಂತ್ರ ಬಿಚ್ಚಿಡುವೆ

03:48 PM Mar 07, 2023 | Team Udayavani |

ಅರಸೀಕೆರೆ: ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ, ಅವರು ಕಾಂಗ್ರೆಸ್‌ ಸೇರಲು ಒಂದು ವರ್ಷದ ಹಿಂದೆಯೇ ನಿರ್ಧರಿಸಿ ಪಕ್ಷದಿಂದ ದೂರವಾಗಿದ್ದರು. ಅವರ ಮನವೊಲಿಕೆಗೆ ನಾವೇನೇನು ಮಾಡಿದ್ದೇವೆ ಎಂಬುದನ್ನು ಚುನಾವಣೆಯ ರಣರಂಗದಲ್ಲಿಯೇ ಎಳೆ,ಎಳೆಯಾಗಿ ಬಿಚ್ಚಿಡುವೆ ಎಂದು ಪಕ್ಷದ ನಾಯಕ , ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಕಾಲ ಶಿವಲಿಂಗೇಗೌಡ ಅವರನ್ನು ರಾಜಕಾರಣದಲ್ಲಿ ಬೆಳೆಸಿ ಅರಸೀಕೆರೆ ಕ್ಷೇತ್ರಕ್ಕೆ ಅವರು ಕೇಳಿದ್ದೆಲ್ಲವನ್ನೂ ಮಾಡಿಕೊಟ್ಟಿದ್ದೇವೆ. ಒಮ್ಮೆ ಜಿಲ್ಲಾ ಪಂಚಾಯತಿ ಸದಸ್ಯನಾಗಿ, ಮೂರು ಬಾರಿ ಶಾಸಕನಾದ ಜೆಡಿಎಸ್‌ ಪಕ್ಷಕ್ಕೆ ದ್ರೋಹ ಮಾಡಿದ ಶಿವಲಿಂಗೇಗೌಡ ಅವರು, ಈಗ ಪಕ್ಷದಿಂದ ಹೊರ ಹಾಕಿದರು ಎಂದು ಹೇಳಿ ನಮ್ಮ ಮೇಲೆ ಗೂಬೆ ಕೂರಿಸಲು ಯತ್ನಿಸಿದರೆ ಎಲ್ಲವನ್ನೂ ಬಿಚ್ಚಿಡಬೇಕಾಗುತ್ತಿದೆ ಎಂದು ರೇವಣ್ಣ ಅವರು ಕಿಡಿಕಾರಿದರು.

ಪಕ್ಷ ಬಿಟ್ಟು ಹೋಗುವಾಗ ಗೌರವದಿಂದ ಹೋಗಲಿ: ಅರಸೀಕೆರೆ ಕ್ಷೇತ್ರದಲ್ಲಿ ನನಗೆ ರಾಜಕೀಯ ಶಕ್ತಿ ಬರಬೇಕಾದರೆ ಹಿಂದುಳಿದವರಿಗೆ ಅಧಿಕಾರ ಕೊಡಬೇಕು ಎಂದು ಹೇಳಿದ್ದರು. ಹಾಗಾಗಿ ಕುರುಬ ಸಮುದಾಯದ ಹುಚ್ಚೇಗೌಡ ಅವರನ್ನು ಜಿಪಂ ಅಧ್ಯಕ್ಷರಾಗಿ, ಬಿಳಿಚೌಡಯ್ಯ ಅವರನ್ನು ಜಿಪಂ ಉಪಾಧ್ಯಕ್ಷರನ್ನಾಗಿ, ವೀರಶೈವ ಸಮುದಾಯದವರನ್ನು ಮತ್ತು ಯಾದವ ಸಮುದಾಯರವನ್ನು ಎಚ್‌ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರಾಗಿ ಮಾಡಿದ್ದೇವೆ . ಪಕ್ಷ ಬಿಟ್ಟು ಹೋಗುವಾಗಿ ಗೌರವದಿಂದ ಹೋಗಲಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಜೆಡಿಎಸ್‌ನ ಉಸಾಬರಿ ಬೇಡ: ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ. ಆದರೆ ಕಳೆದ ಬಾರಿ ಹಾಸನದಲ್ಲಿ ಬಿಜೆಪಿ ಗೆಲ್ಲಬೇಕಾದರೆ ಸಿದ್ದರಾಮಯ್ಯ ಅವರೂ ಕಾರಣ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ರಾಹುಲ್‌ ಗಾಂಧಿಯವರ ಬಾಯಲ್ಲಿ ಹಾಸನದಲ್ಲಿಯೇ ಹೇಳಿಸಿದರು. ಜಾತ್ಯತೀತ ಪಕ್ಷ ಜೆಡಿಎಸ್‌ ಮುಗಿಸಲು ಹೋಗಿ ದ್ದರಿಂದಲೇ 120 ಇದ್ದ ಕಾಂಗ್ರೆಸ್‌ ಸಿದ್ಧರಾಮಯ್ಯ ಅವರ ನಾಯಕತ್ವದಲ್ಲಿ 78ಕ್ಕೆ ಇಳಿಯಿತು. ಬಿಜೆಪಿ ನಾಯಕರು ಕಾಂಗ್ರೆಸ್‌ ಬಾಗಿಲು ಮುಚ್ಚಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಬಾಗಿಲು ಮಚ್ಚದಂತೆ ನೋಡಿಕೊಳ್ಳಲಿ. ಅವರಿಗೆ ಜೆಡಿಎಸ್‌ನ ಉಸಾಬರಿ ಬೇಡ . ಜೆಡಿಎಸ್‌ ಎಷ್ಟು ಸೀಟು ಬರುತ್ತದೆ ಎಂಬುದನ್ನು ಚುನಾವಣೆಯ ನಂತರ ನೋಡಲಿ ಎಂದರು.

ಹಾಸನ ಜಿಲ್ಲೆಗೆ ಕಳೆದ ನಾಲ್ಕು ವರ್ಷದಿಂದ ಬಿಜೆಪಿ ಸರ್ಕಾರ ಏನೆಲ್ಲಾ ತಡೆ ಹಿಡಿದಿದೆ ಎಂಬುದು ಜನರಿಗೆ ಗೊತ್ತಿದೆ. ಹಾಸನಕ್ಕೆ ಮಂಜೂರಾಗಿದ್ದ ತಾಂತ್ರಿಕ ವಿ.ವಿ.ತೋಟಗಾರಿಕೆ ಕಾಲೇಜು ತಡೆಹಿಡಿದರು. ಹಾಸನ ವಿಮಾನ ನಿಲ್ದಾಣದ ಮೂಲ ಯೋಜನೆಯನ್ನೇ ಹಾಳು ಮಾಡಿದ್ದಾರೆ. ಈ ಬಿಜೆಪಿ ಸರ್ಕಾರ ಹಾಸನ ಜಿಲ್ಲೆಗೆ ಯಾವುದೇ ಯೋಜನೆ ಮಂಜೂರು ಮಾಡಿಲ್ಲ ಎಂದು ಆರೋಪಿಸಿದರು.

Advertisement

ದೇವರೇ ಶಿಕ್ಷೆ ಕೊಡೊ ಕಾಲ ಬರುತ್ತೆ : ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರಿಗೆ ಭರವಸೆ ನೀಡಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಿದರು. ಆದರೆ ಕಾಂಗ್ರೆಸ್ಸಿನ ವರೇ ದೇವೇಗೌಡರನ್ನು ಸೋಲಿಸಿದರು. ದೇವೇಗೌಡರನ್ನ ಕಣ್ಣೀರು ಹಾಕಿಸಿದವರಿಗೆ ದೇವರೇ ಅವರಿಗೆ ಶಿಕ್ಷೆ ಕೊಡೊ ಕಾಲ ಬರುತ್ತದೆ ರೇವಣ್ಣ ಅವರು ತಿರುಗೇಟು ನೀಡಿದರು.

ಶಾಸಕ ಶಿವಲಿಂಗೇಗೌಡಗೆ ರೇವಣ್ಣ ತಿರುಗೇಟು : ಎಚ್‌.ಡಿ.ಕುಮಾರಸ್ವಾಮಿ ಅವರ ಮುಂದೆಯೇ ಪಕ್ಷ ಬಿಡಲ್ಲ ಎಂದು ಶಿವಲಿಂಗೇಗೌಡ ಹೇಳಿದ್ದರು. ಹೇಳಿಲ್ಲ ಎಂದು ಆಣೆಮಾಡಲಿ ಎಂದು ಸವಾಲು ಹಾಕಿದ ರೇವಣ್ಣ ಅವರು, ಶಿವಲಿಂಗೇಗೌಡ ಅವರು ಶಾಸಕರಾಗುವ ಮೊದಲೇ ನಾವು ಸಾಕಷ್ಟು ಕೆಲಸ ಆ ಕ್ಷೇತ್ರ ಕ್ಕೆ ಮಾಡಿದ್ದೇವು. ಅರಸೀಕೆರೆಗೆ ಕುಡಿಯುವ ನೀರು ಯೋಜನೆ ಕೊಟ್ಟಿದ್ದು ನಾವು. ನಾವು ಶಾಸಕರನ್ನಾಗಿ ಮಾಡದೆ ಇದ್ದರೆ ಅವರು ಹೇಗೆ ಅಭಿವೃದ್ಧಿ ಮಾಡುತ್ತಿದ್ದರು ಎಂದು ಹೇಳುವ ಮೂಲಕ, ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಎಂದ ಹೇಳಿದ್ದ ಶಿವಲಿಂಗೇಗೌಡಗೆ ರೇವಣ್ಣ ತಿರುಗೇಟು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next