Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಪಡೆದುಕೊಂಡ ಮತದಾರರು ಮತದಾನ ಮಾಡಿದ ಫೋಟೋವನ್ನು ಮೊಬೈಲ್‌ನಲ್ಲಿ ತಂದು ತೋರಿಸಬೇಕು ಎಂದು ಬಿಜೆಪಿಯವರು ತಾಕೀತು ಮಾಡಿ ಹಣ ಹಂಚುತ್ತಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಮತದಾರರು ಮತಗಟ್ಟೆಗೆ ಬಾರದಂತೆ ಹಣ ಕೊಟ್ಟು ಅವರ ಕೈ ಬೆರಳಿಗೆ ಶಾಯಿ ಹಾಕಲಾಗುತ್ತಿದೆ ಎಂಬ ದೂರುಗಳಿವೆ. ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಯವರು ಗಮನ ಹರಿಸಿ ಮತಗಟ್ಟೆಯೊಳಗೆ ಯಾವುದೇ ಮತದಾರರೂ ಮೊಬೈಲ್ ತೆಗೆದುಕೊಂಡು ಹೋಗದಂತೆ ನಿರ್ದೇಶನ ನೀಡ ಬೇಕು ಎಂದು ಮನವಿ ಮಾಡಿದರು.
Related Articles
Advertisement
ಸಮ್ಮಿಶ್ರ ಸರ್ಕಾರ ಕೆಡವಲು ಕೆಲ ಕೈ ನಾಯಕರೇ ಕಾರಣ: ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಉರುಳಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎನ್.ಆರ್. ಸಂತೋಷ್‌ಗೆ ಅರಸೀಕೆರೆಯಲ್ಲಿ ಜೆಡಿಸ್ ಟಿಕೆಟ್ ಕೊಟ್ಟಿದ್ದಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ಅವರು ಮೂದಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿ ಅವರ ಜೊತೆ ಜೋಡೆತ್ತು ಎಂದು ಹೇಳಿಕೊಳ್ಳುತ್ತಿದ್ದವರು ಕಾರಣ ಎಂದು ಡಿ.ಕೆ. ಶಿವಕುಮಾರ್ ಅವರ ಮೇಲೆ ಹರಿಹಾಯ್ದರು.
ಎನ್. ಆರ್.ಸಂತೋಷ್ ಸರ್ಕಾರದ ಪತನಕ್ಕೆ ಬಹಿರಂಗ ಪಾತ್ರ ವಹಿಸಿದ್ದರು. ನೇರವಾಗಿ ಹೋರಾಟ ಮಾಡುವವರ ವಿರುದ್ಧ ಹೋರಾಟ ನಡೆಸಬಹುದು. ಆದರೆ, ಜೊತೆಗಿದ್ದೇ ಕೇಡು ಬಯಸುವ ಹಿತಶತ್ರುಗಳ ವಿರುದ್ಧ ಹೋರಾಡುವುದು ಕಷ್ಟ ಎಂದು ಕೆಲ ಕಾಂಗ್ರೆಸ್ ಮುಖಂಡರೆ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣ ಎಂದು ದೂರಿದರು.
ಹೊಂದಾಣಿಕೆ ರಾಜಕಾರಣ: ದೇವೇಗೌಡರದು ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್‌ನವರು ಆರೋಪ ಮಾಡುವುದಾದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ . ಶಿವಕುಮಾರ್ ಅವರದು ಯಾವ ರಾಜಕಾರಣ? ಅವರು ಮತ್ತು ಅವರ ತಮ್ಮ ಶಾಸಕ, ಸಂಸದರಾಗಿಲ್ಲವೇ ? ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಜಪ ಮಾಡದೆ ರಾಜಕಾರಣ ಮಾಡುವುದೇ ಗೊತ್ತಿಲ್ಲ. ಈ ಎರಡು ರಾಷ್ಟ್ರೀಯ ಪಕ್ಷಗಳದ್ದೂ ಹೊಂದಾಣಿಕೆ ರಾಜಕಾರಣ ಎಂದು ಆರೋಪಿಸಿದರು.
ಜೆಡಿಎಸ್‌ಗೆ ಸ್ಟಾರ್ ಪ್ರಚಾರಕರ ಅಗತ್ಯವಿಲ್ಲ: ರಾಜ್ಯದಲ್ಲಿ ಬಿಜೆಪಿ ಸೋಲಿನ ಭೀತಿಯಿಂದ ಆ ಪಕ್ಷದ ರಾಜ್ಯ ಮುಖಂಡರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ. ಪ್ರಧಾನಿಯವರು ರೋಡ್ ಶೋ ಮಾಡಿ, ಮಾರುಕಟ್ಟೆಯಲ್ಲೂ ಪ್ರಚಾರ ಮಾಡುವಂತಹ ಪರಿಸ್ಥಿತಿ ಬಿಜೆಪಿಯದು. ಜೊತೆಗೆ ಚಿತ್ರ ನಟರನ್ನೂ ಕರೆದುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರ ಮಾಡಿಸುತ್ತಿವೆ. ಆದರೆ, ಜೆಡಿಎಸ್‌ಗೆ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ. ಕುಮಾರ ಸ್ವಾಮಿ ಅವರೇ ಸ್ಟಾರ್ ಪ್ರಚಾರಕರು ಎಂದು ಹೇಳಿದರು.
ಕೃತಜ್ಞತೆಯಿಲ್ಲ: 15 ವರ್ಷ ಕೆಎಂಶಿ ಅವರನ್ನು ಗಿಳಿಯಂತೆ ನೋಡಿಕೊಂಡೆ, ನಾವು ಸಾಕಿದ ಗಿಣಿ ಹದ್ದಿನಂತೆ ಕುಕ್ಕಿ ಹೋಗಿದೆ . 2 ವರ್ಷದ ಹಿಂದೆಯೇ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದ್ದು ನನಗೆ ಗೊತ್ತಿಲ್ಲವೇ ? ಶಿವಲಿಂಗೇಗೌಡ ಕೇಳಿದ್ದನ್ನೆಲ್ಲಾ ಮಾಡಿಕೊಟ್ಟೆ. ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಕುರುಬ ಸಮಾಜದ ಬಿಳಿಚೌಡಯ್ಯ ಮತ್ತು ಹುಚ್ಚೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಎಚ್.ಡಿ.ರೇವಣ್ಣ ಕತೆ ಮುಗಿದಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು , ಸಮ್ಮಿಶ್ರ ಸರ್ಕಾರದಲ್ಲಿ ಬೇಕಾದ ಕಡತಗಳಿಗೆಲ್ಲ ಸಹಿ ಹಾಕಿಸಿಕೊಂಡು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಗಿಸಿದ್ದಾಯಿತು. ಆದರೆ ನನ್ನನ್ನು ಮುಗಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಕೈ ಅಭ್ಯರ್ಥಿ ಕೆಎಂಶಿ ಕೊಂಡು ಸತ್ಯಹರಿಶ್ಚಂದ್ರನಾ?: ನನ್ನ ತಂಟೆಗೆ ಬಂದರೆ ರೇವಣ್ಣ ಅವರ ಜಾತಕವನ್ನು ಬಿಚ್ಚಿಡುವೆ ಎಂದು ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಎಂಶಿ ಅವರು ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಸಿದ ರೇವಣ್ಣ ಅವರು, ಶಿವಲಿಂಗೇಗೌಡ ಸತ್ಯ ಹರಿಶ್ಚಂದ್ರನ ಮಗನಾ ? ಯಾವ್ಯಾವ ಸಮಾಜದವರ ಸೊತ್ತು ಲೂಟಿ ಮಾಡಿದ್ದಾರೆ ಎಂಬುದನ್ನು ಬಿಚ್ಚಿಡಬೇಕಾಗುತ್ತದೆ. ಮಾನ ಮಾರ್ಯಾದೆ ಇದ್ದರೆ ಸುಮ್ಮನಿರಲಿ. 15 ವರ್ಷ ಜೆಡಿಎಸ್‌ನಲ್ಲಿ ಚೆನ್ನಾಗಿ ಮೇಯ್ದು ಈಗ ಮೇವು ಕಡಿಮೆಯಾಗಿದೆ ಎಂದು ಅಲ್ಲಿ (ಕಾಂಗ್ರೆಸ್) ಫಲವತ್ತಾದ ಹುಲ್ಲುಗಾವಲು ಇದೆ ಎಂದು ಮೇಯಲು ಹೋಗಿರ ಬಹುದು ಎಂದು ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದರು