Advertisement

ನನಗೆ ದರ್ಶನ್‌ ಧ್ರುವನಾರಾಯಣ, ಸುನೀಲ್‌ ಬೋಸ್‌ ಬೇರೆ ಅಲ್ಲ

02:34 PM Apr 17, 2023 | Team Udayavani |

ನಂಜನಗೂಡು: ನನಗೆ ದರ್ಶನ್‌ ಧ್ರುವನಾರಾಯಣ ಬೇರೆ ಅಲ್ಲ, ಸುನೀಲ್‌ ಬೇರೆ ಅಲ್ಲ. ತಾವೆಲ್ಲರೂ ಒಂದೆ, ಕಾಂಗ್ರೆಸ್‌ನವರು ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ನಂಜನಗೂಡಿಗೆ ಭಾನುವಾರ ಸಂಜೆ ಆಗಮಿಸಿದ ಅವರು, ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ ರೊಂದಿಗೆ ಮಲ್ಲನಮೂಲೆಗೆ ತೆರಳಿ, ಅಲ್ಲಿನ ಪೀಠಾಧ್ಯಕ್ಷ ಚೆನ್ನಬಸವ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಿ.ನರಸೀಪುರ ಸೇರಿ ಎಲ್ಲೆಡೆ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣದೆ ಎಂದ ಮಹದೇವಪ್ಪ, ತಾವು ನರಸೀಪುರದಲ್ಲಿ 2013ರಿಂದ 18ವರೆಗೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಈಗಲೂ ಅಲ್ಲಿನ ಜನ ನೆನಪಿಸಿಕೊಳ್ಳುತ್ತಿದ್ದು, ತಮ್ಮ ಗೆಲುವಿಗೆ ಅದು ಪೂರಕವಾಗಲಿದೆ ಎಂದು ಹೇಳಿದರು.

ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ ಕಂಡು ಜನತೆ ರೋಸಿ ಹೋಗಿದ್ದಾರೆ. ಈ ಬಾರಿ ರಾಜ್ಯಾದ್ಯಂತ ಆಡಳಿತ ಪಕ್ಷಕ್ಕೆ ಸೋಲಿನ ರುಚಿ ತೋರಿಸಲು ಮತದಾರರು ಕಾದಿದ್ದಾರೆ. ಬನ್ನೂರು ಎಂದರೆ ಜೆಡಿಎಸ್‌ ಎಂಬ ನಂಬಿಕೆ ಈ ಬಾರಿ ಹುಸಿಯಾಗಲಿದೆ ಎಂದ ಮಾಜಿ ಸಚಿವರು, ಜೆಡಿಎಸ್‌ ಹೇಗೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬುದು ಜನಕ್ಕೆ ಅರ್ಥವಾಗಿದೆ ಎಂದು ಹೇಳಿದರು.

ಪ್ರಚಾರದಲ್ಲಿ ಭಾಗಿ: ನಂಜನಗೂಡಲ್ಲಿನ ನಿಮ್ಮ ಬೆಂಬಲಿಗರು ಕಾಂಗ್ರೆಸ್‌ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ ಎಂದಿದ್ದಕ್ಕೆ ಭಾಗಿಯಾಗಲೇ ಬೇಕು. ಕಾಂಗ್ರೆಸ್‌ಗಾಗಿ ಅವರೆಲ್ಲ ಕೆಲಸ ಮಾಡುತ್ತಾರೆ ಎನ್ನುತ್ತ ಉಪಚುನಾವಣೆಯಲ್ಲಿ ತಮ್ಮ ಪುತ್ರ ಸುನೀಲ್‌ ಅಭ್ಯರ್ಥಿ ಎಂಬುದು ಬಿಂಬಿತವಾಗಿತ್ತು. ಕೊನೆಗೆ ಕಳಲೆ ಪಕ್ಷದ ಅಭ್ಯರ್ಥಿಯಾದರು. ನಾವೆಲ್ಲ ಅವರನ್ನು ಗೆಲ್ಲಿಸಿಲ್ಲವೇ, ಈಗಲೂ ಹಾಗೆ ಎಂದು ಹೇಳಿದರು.

Advertisement

ಗೆಲ್ಲಿಸುವುದ ಕರ್ತವ್ಯ: ಇಲ್ಲಿನ ಅಭ್ಯರ್ಥಿಯಾಗಲು ತಮ್ಮ ಮತ್ತು ಧ್ರುವ ಅವರ ನಡುವೆ ಪೈಪೋಟಿ ಇದ್ದದ್ದು ನಿಜ. ಆದರೆ, ಧ್ರುವನಾರಾಯಣ ನಮ್ಮೊಡನೆ ಇಲ್ಲ, ಅವರ ಪುತ್ರ ದರ್ಶನ್‌ ಧ್ರುವನಾರಾಯಣ ಅಭ್ಯರ್ಥಿಯಾಗಿದ್ದಾರೆ. ಅವರು ನಮ್ಮ ಪಕ್ಷದ ಹುರಿಯಾಳು, ಅವರನ್ನು ಗೆಲ್ಲಿಸುವದು ನಮ್ಮ ಕರ್ತವ್ಯ ಎಂದು ಹೇಳಿದರು. ಅನುಮಾನ ಬೇಡ: ಇಲ್ಲಿ ಸೇರಿರುವವರಲ್ಲದೆ, ಕ್ಷೇತ್ರದ ತಮ್ಮ ಬೆಂಬಲಿಗರೆಲ್ಲರೂ ದರ್ಶನ್‌ ಪರವಾಗಿ ಕೆಲಸ ಮಾಡುತ್ತಾರೆ. ತಾವೂ ಅವರಿಗಾಗಿ ಕ್ಷೇತ್ರದಲ್ಲಿ ಮಾತಯಾಚನೆ ಮಾಡುತ್ತೇನೆ. ಇದರಲ್ಲಿ ಅನುಮಾನ ಬೇಡ, ನನಗೆ ದರ್ಶನ್‌ ಬೇರೆ ಅಲ್ಲ, ಸುನಿಲ್‌ ಬೇರೆ ಅಲ್ಲ ಎಂದು ಘೋಷಿಸಿದರು.

ಈ ವೇಳೆ ಮುಖಂಡರಾದ ಇಂಧನಬಾಬು, ದೇವನೂರು ಮಹದೇವಪ್ಪ, ಕೆ.ಬಿ.ಸ್ವಾಮಿ, ಚೋಳ ರಾಜು, ಕಳಲೆ ಮಹೇಶ, ಕೆಂಪಣ್ಣ, ನಾಗರಾಜು, ರವಿ, ಪಿ.ಶ್ರೀನಿವಾಸ, ಮೂಗಶೆಟ್ಟಿ, ಚಾಮರಾಜು, ಶಿವನಂಜು, ಬಸವೇಗೌಡ, ಶಿವರುದ್ರಪ್ಪ, ಪಾಪಣ್ಣ, ಮರಿಸ್ವಾಮಿ, ಮೂಗೂರು ನಂಜುಂಡಸ್ವಾಮಿ, ಗುರುಸಿದ್ದಪ್ಪ, ರವಿ, ಮಲ್ಲೇಶ 200ಕ್ಕೂ ಹೆಚ್ಚು ಕಾರ್ಯಕರ್ತರು ಮಹದೇವಪ್ಪನವರಿಗೆ ಹಾರ ಹಾಕಿ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next