Advertisement
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
Related Articles
Advertisement
ಕೇವಲ ಹಣಕಾಸು ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು. ಈ ಕಾರಣಕ್ಕಾಗಿಯೇ ಹಲವಾರು ರಾಜಕಾರಣಿಗಳು ಅವರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು.
ಎಂದೂ ವಾದಕ್ಕೆ ಸಿಲುಕದೆ, ಎಲ್ಲರ ಅಚ್ಚುಮೆಚ್ಚಿನ ರಾಜಕಾರಣಿಯಾಗಿದ್ದ ಮುಖರ್ಜಿಯವರು ಇನ್ನು ನೆನಪು ಮಾತ್ರ ಎಂಬುದನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ವಿದೇಶಾಂಗ ಸಚಿವರಾಗಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖರ್ಜಿಯವರು ರಾಷ್ಟ್ರಪತಿಗಳಾಗಿದ್ದರು. ಹೀಗಾಗಿ ಅವರನ್ನು ಹಲವಾರು ಸಂದರ್ಭಗಳಲ್ಲಿ ಭೇಟಿ ಮಾಡಿದ್ದುಂಟು. ಜತೆಗೆ ಬೆಂಗಳೂರಿಗೂ ಅವರು ಭೇಟಿ ನೀಡಿದ್ದರು. ಭೇಟಿಯಾದ ಸಂದರ್ಭದಲ್ಲಿ ಜನರ ಬಗೆಗಿನ ಕಾಳಜಿ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ಹಣಕಾಸು ನನ್ನ ನೆಚ್ಚಿನ ಇಲಾಖೆಯೂ ಆಗಿದ್ದರಿಂದ ಆ ಕುರಿತಾಗಿಯೇ ಅವರು ನನ್ನೊಂದಿಗೆ ಹೆಚ್ಚು ಮಾತನಾಡುತ್ತಿದ್ದರು. ಹಣಕಾಸು ಇಲಾಖೆಯ ನಿರ್ವಹಣೆ ಕುರಿತು ತಮ್ಮ ಅನುಭವಗಳನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದೂ ಉಂಟು.
ಇದೆಲ್ಲಕಿಂತ ಮಿಗಿಲಾಗಿ ಅವರ ಸರಳ ನಡವಳಿಕೆ ಗಮನ ಸೆಳೆಯುತ್ತಿತ್ತು. ಇನ್ನು ರಾಷ್ಟ್ರಪತಿಗಳಾಗಿ ಅವರು ನಡೆದುಕೊಂಡ ರೀತಿಯನ್ನು ಇಡೀ ದೇಶವೇ ಕೊಂಡಾಡಿತ್ತು.
ಅವರು ಹಣಕಾಸು ಇಲಾಖೆ ಮಾತ್ರವಲ್ಲ, ಎಲ್ಲ ಇಲಾಖೆಗಳಲ್ಲೂ ಗುರ್ತಿಸಿಕೊಂಡ ರಾಜಕಾರಣಿಗಳ ಸಾಲಿನಲ್ಲಿ ಅತ್ಯಂತ ಮೇಲ್ಮಟ್ಟದ ಸ್ಥಾನ ಪಡೆದಿದ್ದರು. ಅಪ್ಪಟ ಕಾಂಗ್ರೆಸ್ಸಿಗರಾಗಿದ್ದ ಮುಖರ್ಜಿಯವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. ಬಂಗಾಳಿ ಬಾಬು ಎಂದು ಕಾಂಗ್ರೆಸ್ ವಲಯದಲ್ಲಿ ಅಭಿಮಾನದಿಂದ ಕರೆಸಿಕೊಳ್ಳುತ್ತಿದ್ದ ಅವರು ಇತಿಹಾಸ, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅವರೊಬ್ಬ ಭಿನ್ನ ರಾಜಕಾರಣಿಯಾದರು. ಪ್ರಧಾನಿಯಾಗುವ ಎಲ್ಲ ಅರ್ಹತೆ ಅವರಿಗೆ ಇತ್ತು. ಆದರೆ ಅವರು ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ಸ್ವತಂತ್ರ ಚಿಂತನೆಯನ್ನು ಹೊಂದಿದ್ದರು. ಒಂದು ಸಣ್ಣ ಅವಧಿಯನ್ನು ಹೊರತುಪಡಿಸಿ 4 ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದವರು.
ನಿತ್ಯ 18 ಗಂಟೆಗಳ ಕಾಲ ದೇಶಕ್ಕಾಗಿ ಅವರು ಕೆಲಸ ಮಾಡುತ್ತಿದ್ದರು. ತಮ್ಮ ಅಪಾರ ಅನುಭವ ಮತ್ತು ರಾಜಕೀಯ ಚಾಣಾಕ್ಷತೆಯ ಫಲವಾಗಿ ರಾಜಕೀಯದಲ್ಲಿ ಎಂದೂ ನೇಪಥ್ಯಕ್ಕೆ ಸರಿದವರಲ್ಲ. ಬರವಣಿಗೆಯಲ್ಲೂ ಸೈ ಎನಿಸಿಕೊಂಡಿದ್ದರು. ಕೆಲವು ಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಸಿದ್ದರು. ಜತೆಗೆ 10ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವುದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ.
ರಾಷ್ಟ್ರಪತಿಗಳಾಗಿ ರಾಷ್ಟ್ರಪತಿಭವನದಲ್ಲಿಯೂ ಹಲವಾರು ಸುಧಾರಣೆಗಳನ್ನು ಅವರು ಜಾರಿಗೆ ತಂದರು. ಎಷ್ಟೋ ರಾಜಕಾರಣಿಗಳು ರಾಜಕೀಯದಲ್ಲಿ ಹೆಸರು ಮಾಡಿದರೂ ಜನರ ನೆನಪಿನಿಂದ ಬಹುಬೇಗ ಮರೆಯಾಗುತ್ತಾರೆ. ಆದರೆ, ಮುಖರ್ಜಿಯವರ ವ್ಯಕ್ತಿತ್ವ ಅಂಥದ್ದಲ್ಲ. ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ನಡೆದುಕೊಂಡರು. ಮುಖರ್ಜಿಯವರ ಅಗಲಿಕೆ ದೇಶಕ್ಕೆ ನಿಜವಾದ ನಷ್ಟ. ಅವರಂಥ ರಾಜಕಾರಣಿ ನಮಗೆ ಸಿಗುವುದು ಕಷ್ಟವೇ ಸರಿ. ಅವರಿಗೆ ನನ್ನ ಭಾವಪೂರ್ಣ ನಮನಗಳು.