Advertisement

ಜೆಡಿಎಸ್ ಗೆ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ರಾಜೀನಾಮೆ : ಕಾಂಗ್ರೆಸ್‌ ಸೇರಲು ಸಿದ್ಧತೆ

12:55 PM Jun 14, 2022 | Team Udayavani |

ಗಂಗಾವತಿ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಜೆಡಿಎಸ್ ಕಲಬುರಗಿ ವಿಭಾಗದ ಕಾರ್ಯಾಧ್ಯಕ್ಷ ಎಚ್. ಆರ್. ಶ್ರೀನಾಥ್ ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರಲು ಸಿದ್ಧತೆ ನಡೆಸಿದ್ದಾರೆ.

Advertisement

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸೇರಿ ಕಲಬುರಗಿ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದರು ಜತೆಗೆ ತಮ್ಮ ಆಪ್ತ  ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೊಡಿಸಿ ಅವರ ಗೆಲುವಿಗಾಗಿ ಶ್ರಮಿಸಿದ್ದರು. ಇದೀಗ  ಜೆಡಿಎಸ್ ಅಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ .

ಕಳೆದ 6 ತಿಂಗಳಿಂದ ಜೆಡಿಎಸ್ ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ  ಪಾಲ್ಗೊಂಡಿರಲಿಲ್ಲ. ಜತೆಗೆ ಕಾಂಗ್ರೆಸ್ ನ ಪ್ರಮುಖ ಮುಖಂಡರನ್ನು ಬೆಂಗಳೂರು ಸೇರಿದಂತೆ ಗಂಗಾವತಿ ನಗರದಲ್ಲಿ ತಮ್ಮ ನಿವಾಸದಲ್ಲಿ ಭೇಟಿಯಾಗಿ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಎಚ್ ಆರ್ ಶ್ರೀನಾಥ್ ಅವರ ತಂದೆ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ಮುಖಂಡ ಎಚ್ .ಜಿ. ರಾಮುಲು ಅವರು ಕಾಂಗ್ರೆಸ್ ಪಕ್ಷದಲ್ಲಿನ ಕೆಲ ಮುಖಂಡರ ನಡವಳಿಕೆಯಿಂದ ನೊಂದು ರಾಜಕೀಯವಾಗಿ ತಟಸ್ಥರಾಗಿದ್ದರು. ಶ್ರೀನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕರಿಯಣ್ಣ ಸಂಗಟಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 14 ಸಾವಿರ ಮತಗಳನ್ನು ಪಡೆದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸ್ವಲ್ಪ ಅಂತರದಲ್ಲಿ ಸೋಲನ್ನು ಕಂಡಿದ್ದರು .ಇದೀಗ ಎಚ್ ಆರ್ ಶ್ರೀನಾಥ್ ಅವರು ಕಾಂಗ್ರೆಸ್ ಪಕ್ಷ ಸೇರುವುದರಿಂದ ಗಂಗಾವತಿ ಕ್ಷೇತ್ರದಲ್ಲಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗುತ್ತದೆ .

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರೊಂದಿಗೆ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ಮುಖಂಡರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಸಿದ್ದಾರೆ.

Advertisement

ಶೀಘ್ರವೇ ಕಾಂಗ್ರೆಸ್ ಸೇರ್ಪಡೆ: ದೇಶದ ಸರ್ವ ಜನಾಂಗವನ್ನು ಜೊತೆಗೆ ತೆಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ತಮ್ಮ ಕುಟುಂಬ ಕಾಂಗ್ರೆಸ್ ಪಕ್ಷದ ಜೊತೆ ಅವಿನಾಭಾವ ಸಂಬಂಧ ಹೊಂದಿದೆ ಆದ್ದರಿಂದ ಕೆಲ ಕಾರಣಗಳಿಂದ ಕಳೆದ ಚುನಾವಣೆ ಸಂದರ್ಭದಲ್ಲಿ ತಾವು ಜೆಡಿಎಸ್ ಸೇರ್ಪಡೆಯಾಗಿದ್ದು ಇದೀಗ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಒತ್ತಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ರಾಜ್ಯಮಟ್ಟದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಮಾಜಿ ಎಂಎಲ್ಸಿ ಎಚ್. ಆರ್. ಶ್ರೀನಾಥ್ ಉದಯವಾಣಿಗೆ ತಿಳಿಸಿದ್ದಾರೆ .

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಘು ಗುಜ್ಜಲ್ ಹಾಗೂ ಎಚ್. ಆರ್. ಭರತ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next