ಮುಂಬೈ: ಒಂದು ಕಾಲದಲ್ಲಿ ಮುಂದಿನ ಸಚಿನ್ ತೆಂಡೂಲ್ಕರ್ ಎಂದು ಹೆಸರು ಪಡೆದಿದ್ದ ಮುಂಬೈ ಬ್ಯಾಟರ್ ಪೃಥ್ವಿ ಶಾ ಇದೀಗ ಯಾವುದೇ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಕೂಡಾ ಯಾವ ಫ್ರಾಂಚೈಸಿಯೂ ಅವರಿಗೆ ಬಿಡ್ ಮಾಡಲಿಲ್ಲ.
2018 ರ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಕಳೆದ ಕೆಲವು ವರ್ಷಗಳಲ್ಲಿ ಅವನತಿಯತ್ತ ಸಾಗುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಪರಿಗಣನೆಯಿಂದ ಹೊರಗುಳಿದಿದೆ. ಮುಂಬರುವ ಸೀಸನ್‌ನಲ್ಲಿಯೂ ಶಾ ಐಪಿಎಲ್‌ನಲ್ಲಿ ಆಡುವುದಿಲ್ಲ. ಎರಡು ಬಾರಿ ಅವರ ಹೆಸರು ಹರಾಜಿನಲ್ಲಿ ಬಂದಿದ್ದು, 75 ಲಕ್ಷ ರೂ.ಗಳ ಮೂಲ ಬೆಲೆಯ ಹೊರತಾಗಿಯೂ ಯಾವುದೇ ತಂಡ ಖರೀದಿ ಮಾಡಲು ಮನಸ್ಸು ಮಾಡಲಿಲ್ಲ.
ಫಾರ್ಮ್ ಕೊರತೆಯ ಹೊರತಾಗಿ, ಪೃಥ್ವಿ ಶಾ ಅವರ ನಡವಳಿಕೆ ಮತ್ತು ಫಿಟ್ನೆಸ್ ಗಾಗಿ ಭಾರತದ ವಿವಿಧ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಟೀಕೆ ಮಾಡುತ್ತಿದ್ದಾರೆ. ಇದೀಗ ಭಾರತದ ಮಾಜಿ ಆಯ್ಕೆಗಾರರೊಬ್ಬರು ಅವರ ಸುಧಾರಣೆಯನ್ನು ಪ್ರಶ್ನಿಸಿದ್ದಾರೆ.
“ಪೃಥ್ವಿ ಶಾ ಅವರು ಡೆಲ್ಲಿ ಕ್ಯಾಪಿಟಲ್ಸ್ ನಲ್ಲಿದ್ದರು. ಅಲ್ಲಿ ಅವರಿಗೆ ಅಂಡರ್ 19 ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅಲ್ಲದೆ ರಿಕಿ ಪಾಂಟಿಂಗ್, ಸೌರವ್ ಗಂಗೂಲಿಯೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಮುಂಬೈ ಕ್ರಿಕೆಟ್ ಬೋರ್ಡ್ ನಲ್ಲಿ ಸಚಿನ್ ತೆಂಡೂಲ್ಕರ್ ಕೂಡಾ ಶಾ ಜತೆ ಚರ್ಚೆ ನಡೆಸಿದ್ದಾರೆ. ಈ ದಿಗ್ಗಜರೇನು ಮೂರ್ಖರೆ? ಇಷ್ಟೆಲ್ಲಾ ಆದ ಮೇಲೂ ಏನಾದರೂ ಬದಲಾವಣೆ ಕಂಡಿದೆಯಾ? ಬದಲಾವಣೆ ಆಗಿದ್ದರೂ ಗಮನಿಸುವಷ್ಟು ಏನಿಲ್ಲ?” ಎಂದು ಮಾಜಿ ಆಯ್ಕೆಗಾರರೊಬ್ಬರು ಹೇಳಿದ್ದಾರೆ.
ಇತ್ತೀಚೆಷ್ಟೇ ರಣಜಿ ಟ್ರೋಫಿ ಕೂಟದಿಂದಲೂ ಪೃಥ್ವಿ ಶಾ ಅವರನ್ನು ಕೈಬಿಡಲಾಗಿತ್ತು. ಸದ್ಯ ಶಾಗೆ ಎಲ್ಲಾ ಬಾಗಿಲು ಮುಚ್ಚಿದಂತೆ ಕಾಣುತ್ತಿದೆ.