ಲಕ್ನೋ:ಉತ್ತರಪ್ರದೇಶದ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಶರ್ಮಾ ಅವರು ಜನವರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹ ವ್ಯಕ್ತಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ:ಸದಾನಂದಗೌಡರಿಗೆ ಅವಮಾನ ಮಾಡುವ ಕೆಲಸವನ್ನು ವಿರೋಧ ಪಕ್ಷ ಮಾಡಿದೆ : ಕಟ್ಟಾ ಸುಬ್ರಹ್ಮಣ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ಉಸ್ತುವಾರಿಯನ್ನು ಶರ್ಮಾ ಅವರಿಗೆ ವಹಿಸಲಾಗಿತ್ತು. ಅಲ್ಲದೇ ಇಡೀ ಉತ್ತರಪ್ರದೇಶದಲ್ಲಿ ವಾರಣಾಸಿ ಕೋವಿಡ್ ಲಸಿಕೆಯ ಸುರಕ್ಷಿತ ಸ್ಥಳವನ್ನಾಗಿ ಮಾಡಿದ್ದ ಹೆಗ್ಗಳಿಕೆಗೆ ಶರ್ಮಾ ಪಾತ್ರರಾಗಿದ್ದರು.
ಉತ್ತರಪ್ರದೇಶ ಸರ್ಕಾರದಲ್ಲಿ ಶರ್ಮಾ ಅವರ ಸ್ಥಾನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದ ನಂತರ ಇದೀಗ ಮೌ ಕ್ಷೇತ್ರದ ಬಿಜೆಪಿ ಎಂಎಲ್ ಸಿ ಶರ್ಮಾ ಅವರನ್ನು ಕೊನೆಗೂ ಉತ್ತರಪ್ರದೇಶ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಸ್ವಯಂ ನಿವೃತ್ತಿ ಪಡೆದ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಶರ್ಮಾ ಅವರು ಉತ್ತರಪ್ರದೇಶ ಮೌ ಜಿಲ್ಲೆಯ ಅಧಿಕಾರಿಯಾಗಿದ್ದರು. ಗುಜರಾತ್ ನಲ್ಲಿ ಪ್ರಧಾನಿ ಮೋದಿ ಅವರ ಜತೆ ಕಾರ್ಯನಿರ್ವಹಿಸಿದ್ದ ಶರ್ಮಾ ಮೋದಿ ಅವರ ಆಪ್ತ ಎಂದು ಪರಿಗಣಿಸಲಾಗಿದೆ.