ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ಈಗ ಮತ್ತೂಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11 ಸಾವಿರ ಕೋಟಿ ರೂ. ಮೋಸ ಮಾಡಿದ ಪ್ರಕರಣದಲ್ಲಿ ನೀರವ್ ಮೋದಿ ಮಾವ ಹಾಗೂ ಗೀತಾಂಜಲಿ ಜೆಮ್ಸ್‌ನ ಮಾಲೀಕ ಮೆಹುಲ್ ಚೋಕ್ಸಿ ಗ್ರಾಹಕರಿಗೆ ನಕಲಿ ವಜ್ರಗಳನ್ನು ಮಾರುತ್ತಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. 2013ರಲ್ಲಿ ಕಂಪನಿ ತ್ಯಜಿಸಿದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಶ್ರೀವಾಸ್ತವ ಈ ಬಗ್ಗೆ ವಿವರ ಬಹಿರಂಗಗೊಳಿಸಿದ್ದಾರೆ.
ಪ್ರಕರಣದ ಬೆನ್ನಲ್ಲೇ ನಾಪತ್ತೆಯಾಗಿರುವ ನೀರವ್ ಮೋದಿ, ಸರ್ಕಾರದ ಮೂಲಗಳ ಪ್ರಕಾರ ದುಬೈನಲ್ಲಿ ಇದ್ದಾರೆ ಎನ್ನಲಾಗಿದೆ.
ಸಿಬಿಐ ಎಫ್ಐಆರ್: ರೊಟೊಮ್ಯಾಕ್ ಪೆನ್ಸ್ ಮಾಲೀಕ ವಿಕ್ರಮ್ ಕೊಠಾರಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದ್ದು, ಸಾಲದ ಮೊತ್ತವನ್ನು 3695 ಕೋಟಿ ರೂ. ಎಂಬುದಾಗಿ ನಮೂದಿಸಿದೆ.
ಕಾನ್ಪುರ ಮೂಲದ ಕೊಠಾರಿ, ಪತ್ನಿ ಸಾಧನಾ ಕೊಠಾರಿ ಮತ್ತು ಪುತ್ರ ರಾಹುಲ್ ಕೊಠಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಇನ್ನೂ ಯಾರನ್ನೂ ಬಂಧಿಸಿಲ್ಲ. ವಿಕ್ರಮ್ ಪತ್ನಿ ಮತ್ತು ಪುತ್ರನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಈ ಸಂಬಂಧ ಬ್ಯಾಂಕ್ ಆಫ್ ಬರೋಡಾ ದೂರು ದಾಖಲಿಸಿದ್ದು, ಐದು ಬ್ಯಾಂಕ್‌ಗಳಿಗೆ ಬಡ್ಡಿ ಸಮೇತ 3695 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಹೇಳಿದೆ. ಅಸಲಿನ ಮೊತ್ತ 2919 ಕೋಟಿ ರೂ. ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.