Advertisement

Holland ಮಾಜಿ ಪ್ರಧಾನಿ- ಪತ್ನಿ ದಯಾಮರಣಕ್ಕೆ ಶರಣು

12:24 AM Feb 15, 2024 | Team Udayavani |

ಹೊಸದಿಲ್ಲಿ: ಹಾಲೆಂಡ್‌ನ‌ ಮಾಜಿ ಪ್ರಧಾನಿ ಡ್ರೈಸ್‌ ವ್ಯಾನ್‌ ಆ್ಯಗ್ಟ್ ಮತ್ತವರ ಪತ್ನಿ ಯೂಜೆನಿ ಆ್ಯಗ್ಟ್ ತಮ್ಮ 93ನೇ ವರ್ಷದಲ್ಲಿ ಪರಸ್ಪರ ಕೈಹಿಡಿದುಕೊಂಡು ಸಾವನ್ನಪ್ಪಿದ್ದಾರೆ.

Advertisement

“ನಮ್ಮಿಬ್ಬರಿಂದ ಬದುಕಲಾಗದು. ಆದ್ದರಿಂದ ದಯಾಮರಣಕ್ಕೆ ಅವಕಾಶ ಕೊಡಿ’ ಎಂಬ ದಂಪತಿಯ ಮನವಿಯನ್ನು ಸರಕಾರ ಸಮ್ಮತಿಸಿದೆ. ಫೆ. 5ರಂದೇ ಇಬ್ಬರು ಮರಣ ಹೊಂದಿದ್ದರೂ, ಮಾಜಿ ಪ್ರಧಾನಿಯೇ ಸ್ಥಾಪಿಸಿರುವ “ರೈಟ್ಸ್‌ ಫೋರಮ್‌’ . ದಂಪತಿಯ ಕುಟುಂಬಸ್ಥರ ಅನುಮತಿ ಪಡೆದು ಬುಧವಾರ ಸುದ್ದಿ ಪ್ರಕಟಿಸಿದೆ.

ಹಾಲೆಂಡ್‌ನ‌ಲ್ಲಿ ಯುಥನೇಶಿಯ ನಿಯಮದ ಪ್ರಕಾರ, ದಯಾಮರಣ ಕ್ಕೊಳಗಾಗಲು ಅವಕಾಶವಿದೆ. ತೀವ್ರ ಪರಿಶೀಲನೆ ಬಳಿಕ, ಯುಥನೇಶಿಯ ಪ್ರಕಾರ ಇಂಜೆಕ್ಷನ್‌ ಪಡೆಯಲು ದಂಪತಿಗೆ ಅನುಮತಿ ನೀಡಲಾಗಿದೆ.
ಡ್ರೈಸ್‌ ಆ್ಯಗ್ಟ್ 1977 ರಿಂದ 82 ರವರೆಗೆ ಪ್ರಧಾನಿಯಾಗಿದ್ದರು. ಕ್ರಿಶ್ಚಿಯನ್‌ ಡೆಮೋಕ್ರಾಟಿಕ್‌ ಅಪೀಲ್‌ ಪಕ್ಷದ ಮೊದಲ ಪ್ರಧಾನಿ ಅವರು. ಜೀವನವಿಡೀ ಮೌಲ್ಯಗಳನ್ನು ಪ್ರತಿಪಾದಿಸಿದ್ದ ಅವರು, ಪ್ಯಾಲೆಸ್ತೀನಿಯನ್ನರ ಹಕ್ಕುಗಳಿಗಾಗಿ ರೈಟ್ಸ್‌ ಫೋರಮ್‌ ಅನ್ನು ಸ್ಥಾಪಿಸಿದ್ದರು. ಡ್ರೈಸ್‌ ಆ್ಯಗ್ಟ್ ಮತ್ತವರ ಪತ್ನಿ ಯೂಜೆನಿ 70 ವರ್ಷಗಳಿಂದ ಒಟ್ಟಿಗೆ ಬದುಕಿದ್ದರು. ಇಬ್ಬರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದಾಗಲೂ, ಬೇರೆಬೇರೆ ಬದುಕಲು ಸಾಧ್ಯವಿಲ್ಲ ಎಂಬ ಮನಃಸ್ಥಿತಿ ಹೊಂದಿದ್ದರು.

ಏಕೆ ಸಾವನ್ನು ಆಯ್ದುಕೊಂಡರು?
ಡ್ರೈಸ್‌-ಯೂಜೆನಿ ದಂಪತಿಗೆ 93 ವರ್ಷ. ಪತ್ನಿಯನ್ನು ಡ್ರೈಸ್‌ ಸದಾ ನನ್ನ ಹುಡುಗಿ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಿದ್ದರು. 2019ರಲ್ಲಿ ಡ್ರೈಸ್‌ಗೆ ಬ್ರೈನ್‌ ಹ್ಯಾಮರೇಜ್‌ ಆಯ್ತು. ಅಲ್ಲಿಂದ ಅವರ ಶಾರೀರಿಕ ಸ್ವಾಧೀನ ತಪ್ಪಿತು. ಪೂರ್ಣ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾದ ಸ್ಥಿತಿ. ಇನ್ನು 93 ವರ್ಷದ ಪತ್ನಿ ಯೂಜೆನಿಯೂ ದುರ್ಬಲರಾಗಿದ್ದರು. ಈ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಿಸಿದಾಗ ಪರಸ್ಪರ ಒಟ್ಟಿಗೆ ದೇಹಬಿಡಲು ನಿರ್ಧರಿಸಿದರು.

ಯುಥನೇಶಿಯ ಹಿನ್ನೆಲೆಯೇನು? ಯುಥನೇಶಿಯ ಅನ್ನುವುದು ಗ್ರೀಸ್‌ ಭಾಷೆಯಿಂದ ಉತ್ಪತ್ತಿಯಾಗಿದೆ. ಮೂಲಾರ್ಥದ ಪ್ರಕಾರ ಒಳ್ಳೆಯ ಸಾವು ಎಂದರ್ಥ. ಇಂತಹದ್ದೊಂದು ಸಾವನ್ನು ಪಡೆಯಲು ಹಲವು ದೇಶಗಳಲ್ಲಿ ಕಾನೂನು ರೂಪಿಸಿದ್ದು, ದುರ್ಬಳಕೆಯಾಗದಂತೆ ಬಿಗಿ ಮಾಡಲಾಗಿದೆ. ಹಾಲೆಂಡ್‌ನ‌ಲ್ಲಿ 2020 ರಲ್ಲಿ 8,720 ಮಂದಿ, 2022ರಲ್ಲಿ 29 ಜೋಡಿ ಇದೇ ರೀತಿ ಸಾವನ್ನಪ್ಪಿದ್ದಾರೆ.

Advertisement

ಇದರ ನಿಯಮದ ಪ್ರಕಾರ, ವ್ಯಕ್ತಿಗಳು ಸ್ವತಃ ಸಾವನ್ನು ಬಯಸಿ ಅರ್ಜಿ ಸಲ್ಲಿಸಬೇಕು. ವ್ಯಕ್ತಿಗಳು ಸಹಿಸಲಾಗದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದನ್ನು ಸುಧಾರಿಸಲು ಸಾಧ್ಯವೇ ಇಲ್ಲ ಎಂದು ಖಚಿತವಾದ ನಂತರ ವೈದ್ಯರು, ಮನವಿಗೆ ಸಹಿ ಹಾಕುತ್ತಾರೆ. ಆಗ ವೈದ್ಯರು ತಕ್ಷಣವೇ ಸಾವು ಬರಲು ನೆರವಾಗುವ ಚುಚ್ಚುಮದ್ದು ನೀಡುತ್ತಾರೆ.
ಭಾರತದಲ್ಲಿ ಪರೋಕ್ಷ ಯುಥನೇಶಿಯ: ಭಾರತದಲ್ಲಿ 2018 ರಲ್ಲಿ ಪರೋಕ್ಷ ಯುಥನೇಶಿಯಗೆ ಅನುಮತಿ ನೀಡಲಾಗಿದೆ. ಅರ್ಥಾತ್‌ ಒಬ್ಬ ವ್ಯಕ್ತಿಗೆ ಏನೇ ಚಿಕಿತ್ಸೆ ನೀಡಿದರೂ, ಬದುಕಲು ಸಾಧ್ಯವಿಲ್ಲ ಎನ್ನುವುದು ಖಚಿತವಾದ ನಂತರ ಚಿಕಿತ್ಸೆ ನಿಲ್ಲಿಸಲು ಅನುಮತಿ ನೀಡಲಾಗುತ್ತದೆ. ಆಗ ವ್ಯಕ್ತಿ ಸಾಯಲು ಸಾಧ್ಯವಾಗುತ್ತದೆ. ಆದರೆ ಇದು ನೇರ ಯುಥನೇಶಿಯ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next