ಬಾಗಲಕೋಟೆ: ಜಿಲ್ಲೆಯ ಬಾದಾಮಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಬಜೆಟ್‌ನಲ್ಲಿ 800 ಕೋಟಿ ಘೋಷಣೆ ಮಾಡುವಂತೆ ಕ್ಷೇತ್ರದ ಶಾಸಕರೂ ಆಗಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಬುಧವಾರ ಒಂದೇ ದಿನ ವಿವಿಧ ಬೇಡಿಕೆಗಳ ಕುರಿತು ನಾಲ್ಕು ಪ್ರತ್ಯೇಕ ಪತ್ರ ಬರೆದಿರುವ ಸಿದ್ದರಾಮಯ್ಯ, ಮುಖ್ಯವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ಪ್ರವಾಸಿ ತಾಣಗಳಿಗೆ ಸೌಲಭ್ಯ: ಬಾದಾಮಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ, ಬನಶಂಕರಿ, ಮಹಾಕೂಟ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ದೇಶ- ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಈ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಕುರಿತು ನಾನು ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಅವರೊಂದಿಗೆ ಖುದ್ದಾಗಿ ಎಲ್ಲ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಎಲ್ಲ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಅಂದಾಜು 800 ಕೋಟಿ ರೂ. ಅನುದಾನದ ಅಗತ್ಯವಿದೆ. ಆದ್ದರಿಂದ ಬರುವ 2019-20ನೇ ಸಾಲಿನ ಬಜೆಟ್‌ನಲ್ಲಿ ಬಾದಾಮಿ ಕ್ಷೇತ್ರದ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ 800 ಕೋಟಿ ಅನುದಾನ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬಾದಾಮಿಗೆ ಎಂಜಿನಿಯರಿಂಗ್ ಕಾಲೇಜು: ಬಾದಾಮಿ ಪಟ್ಟಣದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಅಗತ್ಯವಿದೆ. ಕ್ಷೇತ್ರದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಬೇರೆ ಪಟ್ಟಣ ಹಾಗೂ ಖಾಸಗಿ ಕಾಲೇಜು ಅವಲಂಭಿಸಿದ್ದಾರೆ. ಹೀಗಾಗಿ ಬಾದಾಮಿಗೆ ಎಂಜಿನಿಯರಿಂಗ್ ಕಾಲೇಜು, ಗುಳೇದಗುಡ್ಡಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವಂತೆಯೂ ಸಿದ್ದರಾಮಯ್ಯ ಪ್ರತ್ಯೇಕ ಪತ್ರ ಬರೆದಿದ್ದಾರೆ.
ಜವಳಿ ಪಾರ್ಕ್ ಘೋಷಿಸಿ : ಬಾದಾಮಿ ಕ್ಷೇತ್ರ ವ್ಯಾಪ್ತಿಯ ಗುಳೇದಗುಡ್ಡ ಪಟ್ಟಣ ಬಹುದೊಡ್ಡ ನಗರವಾಗಿದೆ. ಇಲ್ಲಿ ಅಸಂಘಿತ, ಸಂಘಟಿತ ವಲಯದ ದುಡಿಯುವ ನೇಕಾರರ ಉಳಿವಿಗಾಗಿ ಹಾಗೂ ಜೀವನೋಪಯಕ್ಕಾಗಿ, ನೇಕಾರರ ವಲಸೆ ಹೋಗುವುದನ್ನು ತಡೆಗಟ್ಟಲು ಗುಳೇದಗುಡ್ಡಕ್ಕೆ ಶಾಶ್ವತ ಉದ್ಯೋಗ ಕಲ್ಪಿಸಲು ಜವಳಿ ಪಾರ್ಕ್, ಪಾವರ್‌ಲೂಮ್ ಪಾರ್ಕ್ ಮತ್ತು ಗಾರ್ಮೆಂಟ್ ಸ್ಥಾಪಿಸಲು ಬರುವ ಬಜೆಟ್‌ನಲ್ಲಿ ಅಗತ್ಯ ಅನುದಾನದೊಂದಿಗೆ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಕೆರೆ ತುಂಬಿಸಲು 90 ಕೋಟಿ: ಬಾದಾಮಿ ಕ್ಷೇತ್ರ ವ್ಯಾಪ್ತಿಯ ಮಲಪ್ರಭಾ ನದಿಗೆ ಅಡ್ಡಲಾಗಿ ವಿವಿಧ ಬ್ಯಾರೇಜ್ ಹಾಗೂ ಕ್ಷೇತ್ರದ ಹಲವು ಕೆರೆಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ವಿಸ್ತೃತ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾಮಗಾರಿಗಳಿಗೆ 90 ಕೋಟಿ ಅನುದಾನದ ಅಗತ್ಯವಿದ್ದು , ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಒಂದೇ ದಿನ ನಾಲ್ಕು ಪತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ವಿವಿಧ ಬೇಡಿಕೆಗಳ ಕುರಿತು ಒಂದೇ ದಿನ ನಾಲ್ಕು ಪ್ರತ್ಯೇಕ ಪತ್ರ ಬರೆದು, ಗಮನ ಸೆಳೆದಿದ್ದಾರೆ.