Advertisement

ತುಂಬಿದ ಕೊಡ ತುಳುಕಲ್ಲ, ಖಾಲಿ ಡಬ್ಬಗಳೇ ಹೆಚ್ಚು ಶಬ್ದ ಮಾಡುವುದು: ಸಿದ್ದರಾಮಯ್ಯ ವ್ಯಂಗ್ಯ

01:44 PM Jul 30, 2020 | keerthan |

ಮೈಸೂರು: ತುಂಬಿದ ಕೊಡ ತುಳುಕಲ್ಲ, ಖಾಲಿ ಡಬ್ಬಗಳೇ ಶಬ್ದ ಮಾಡುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಎಸ್ ವೈ ಸರ್ಕಾರದ ಒಂದು ವರ್ಷ ಪೂರೈಸಿದ ಕುರಿತು ವ್ಯಂಗ್ಯವಾಡಿದರು.

Advertisement

ಮೈಸೂರು ಪತ್ರಕರ್ತರ ಸಂಘ‌ದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸರ್ಕಾರ ಒಂದು ವರ್ಷದ ಪೂರೈಸಿದ್ದಕ್ಕೆ ಯಾವ ಮುಖ್ಯಮಂತ್ರಿಯೂ ಕೂಡ ಈ ರೀತಿ ಸಂಭ್ರಮಾಚರಣೆ ಮಾಡಿಕೊಂಡಿರಲಿಲ್ಲ. ಆದರೆ ಇವರು ಮೂರು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಸಂಭ್ರಮಿಸಿದರು. ಇವರು ಒಂದು ವರ್ಷದ ಸಾಧನೆ ಜೊತೆ ಇವರ ಪ್ರಣಾಳಿಕೆ‌ ಸಹ ಜೊತೆಯಲ್ಲಿ ಇಡಲಿ. ಆಗ ಇವರ ಸಾಧನೆ ಹಾದಿ ಎಲ್ಲರಿಗೂ ತಿಳಿಯಲಿದೆ ಎಂದರು.

ಕೇಂದ್ರದಿಂದ 1800 ಕೋಟಿ ರೂ. ಕೊಟ್ಟಿದ್ದಕ್ಕೆ ರಾಜಾಹುಲಿ ಎಂದು ಬೀಗಿದರು. ಆದರೆ ಅವರಿಗೆ ಪ್ರವಾಹ ಪೀಡಿತರಿಗೆ ಪರಿಹಾರ ಕೇಳಲು ಸಾಧ್ಯವಾಗಲಿಲ್ಲ. ಈಗಲೂ ಪ್ರವಾಹ ಪೀಡಿತರಿಗೆ ಮನೆ ಕಟ್ಟಿಸಿಕೊಟ್ಟಿಲ್ಲ.  ಪ್ರವಾಹ ಎದುರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ನೆರೆ ಪರಿಹಾರಕ್ಕೆ‌ ನಾವು ಸಾಧನೆ ಅಂತ ಕರೀಬೇಕಾ ಎಂದು ಪ್ರಶ್ನಿಸಿದರು.

ಇದರ ಮಧ್ಯೆ ಉಪ ಚುನಾವಣೆಯಲ್ಲಿ ಬೇಕಾಬಿಟ್ಟಿ ದುಡ್ಡು ಖರ್ಚು ಮಾಡಿದರು. ಒಂದೊಂದು ಉಪ‌ಚುನಾವಣೆಗೆ 20, 25 ಕೋಟಿ ರೂ. ಖರ್ಚು ಮಾಡಿದ್ದಾರೆ. ಇನ್ನೂ ಕೆಲವು ಕಡೆ 50 ರಿಂದ 60 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದನ್ನೆಲ್ಲ ಬಿಜೆಪಿ ಅವರು ಸಾಧನೆ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ದೆಹಲಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ‌ ನಿಯಂತ್ರಣ ಮಾಡಿದ್ದಾರೆ. ಕರ್ನಾಟಕದಲ್ಲಿ ನೂರಾರು ಕೋಟಿ ಹಣ ಖರ್ಚು ಮಾಡಿದ್ದೀರಿ. ನಿಯಂತ್ರಣ ಮಾಡಲು ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

Advertisement

ಲೆಕ್ಕ ಕೊಡಿ ಅಂದ್ರೆ ಸುಳ್ಳು ಹೇಳ್ತಿರಾ. ಇದನ್ನ ಪ್ರಶ್ನೆ ಮಾಡಿದ್ರೆ ಸಿದ್ದರಾಮಯ್ಯ ಸಹಕಾರ ನೀಡ್ತಿಲ್ಲ ಎನ್ನುತ್ತೀರಾ.  ನಾವು ಹೇಳಿದ ಒಂದೆ ಒಂದು ಸಲಹೆ ಸ್ವೀಕರಿಸಿಲ್ಲ. ಇವರು ದುಡ್ಡು ಹೊಡೆಯಲು ಶುರು ಮಾಡಿದಾಗ ನಾನು ಮಾತನಾಡಿದೆ ಎಂದರು.

ಕರ್ನಾಟಕ ಈಗ ಸೂತಕದ ಮನೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಬೇಕಿತ್ತಾ? ಇಂತಹಾ ವೇಳೆಯಲ್ಲಿ ನೀವು ದುಡ್ಡು ಹೊಡೆಯಬೇಕಾ? ಇದು ನಿಮ್ಮ ಸಾಧನೆಯೇ ಯಡಿಯೂರಪ್ಪ. ಸಾಧನೆ ಮಾಡಬೇಕಾಗಿದ್ದದ್ದು ಕೋವಿಡ್ ನಿಯಂತ್ರಣದಲ್ಲಿ, ದುಡ್ಡು ಹೊಡೆಯೋದರಲ್ಲಿ ಅಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next