ಬೆಂಗಳೂರು: ಬಜೆಟ್ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಮುನಿಸು ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆಗೆ ಮಾತ್ರ ಮುಂದುವರಿಯಲಿದೆ ಎಂಬ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ.
ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಸಿದ್ದರಾಮಯ್ಯನವರು ಆಪ್ತರ ಜೊತೆ ಮಾತುಕತೆ ನಡೆಸುತ್ತಿರುವ ವೇಳೆ ಹೇಳಿರುವ ಮಾತು ಇದೀಗ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಒಂದು ವರ್ಷದವರೆಗೆ ನನ್ನ ಯಾರೂ ಮುಟ್ಟುವ ಹಾಗಿಲ್ಲ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಇದೀಗ ಸಿದ್ದರಾಮಯ್ಯನವರು ಲೋಕಸಭೆ ಚುನಾವಣೆ ಬಳಿಕ ಏನಾಗುತ್ತೋ ನೋಡೋಣ ಎಂದು ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಐದು ವರ್ಷಕ್ಕೆ ಒಪ್ಪಂದ ಆಗಿದೆ; ಪರಮೇಶ್ವರ್
ಸಿದ್ದರಾಮಯ್ಯನವರ ಹೇಳಿಕೆ ಕುರಿತು ಚಿತ್ರದುರ್ಗದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ ಸಿಡಿಮಿಡಿಗೊಂಡು, ನಮ್ಮದು 5 ವರ್ಷಕ್ಕೆ ಒಪ್ಪಂದವಾಗಿದೆ. ಅದರಂತೆ ಐದು ವರ್ಷ ಸರ್ಕಾರ ನಡೆಸುತ್ತೇವೆ. ರಾಜಕಾರಣದಲ್ಲಿ ಯಾವಾಗ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಯಾವ ಕಾರಣಕ್ಕೆ ಹೇಳಿದ್ದಾರೋ ಅವರನ್ನೇ ಹೋಗಿ ಕೇಳಿ ಎಂದು ತಿಳಿಸಿದ್ದಾರೆ.