ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಪತ್ರ ಸಮರ’ ಮುಂದುವರಿದಿದ್ದು, ರಾಜ್ಯದ ಸಿವಿಲ್ ಸೇವೆಗಳ ಎಲ್ಲ ವೃಂದಗಳ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲನೆ ಮಾಡುವ ಕುರಿತು ಪತ್ರ ಬರೆದಿದ್ದಾರೆ.
ಈ ಹಿಂದೆ ಬಾದಾಮಿ ಕ್ಷೇತ್ರದ ಅಭಿವೃದ್ಧಿ ಹಾಗೂ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ವಿಚಾರ ಸೇರಿದಂತೆ ಎಂಟು ಪತ್ರ ಬರೆದಿದ್ದ ಸಿದ್ದರಾಮಯ್ಯ ಅವರು ಈಗ ಒಂಬತ್ತನೇ ಪತ್ರ ಬರೆದಿದ್ದು, ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ನೇಮಕಾತಿಗಳಲ್ಲಿ ಎಸ್ಸಿ ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾತಿ ನಿಯಮ ಅನುಸರಿಸಿ ನೇಮಕಾತಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
1995 ರ ಜೂನ್ 20 ಹೊರಡಿಸಿರುವ ಆದೇಶದ ನಿಯಮದ ಪ್ರಕಾರ ಕೆಪಿಎಸ್ಸಿ ನೇಮಕಾತಿಯಲ್ಲಿ ಎಸ್ಸಿ ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗ ಅಭ್ಯರ್ಥಿಗಳನ್ನು ಮೀಸಲಾತಿ ಪ್ರಕಾರ ಆಯ್ಕೆ ಮಾಡಲಾಗುತ್ತಿದೆ. ದಲಿತ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದವರಿಗಿಂತ ಹೆಚ್ಚಿನ ಅಂಕ ಪಡೆದಿದ್ದರೆ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆದರೆ, ಇತ್ತೀಚೆಗೆ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆದು ಮೀಸಲಾತಿ ಪಡೆಯುವ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದರೂ, ಅವರನ್ನು ಮೀಸಲಾತಿಯಲ್ಲಿಯೇ ಪರಿಗಣಿಸಬೇಕು ಎಂದು ಸೂಚನೆ ನೀಡಿದೆ. ಸರ್ಕಾರದ ಈ ಸೂಚನೆಯ ವಿರುದ್ಧ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.
ನವೆಂಬರ್ 3 ರಂದು ಸರ್ಕಾರ ಕೆಪಿಎಸ್ಸಿಗೆ ಬರೆದ ಪತ್ರದಂತೆ ನೇಮಕಾತಿ ಮಾಡಿದರೆ, ದಲಿತ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ 1995 ಆದೇಶದಂತೆ ನೇಮಕ ಮಾಡಿಕೊಳ್ಳಲು ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ, ಇದುವರೆಗೂ ಅಧಿಕೃತ ಆದೇಶ ಹೊರಡಿಸದಿರುವುದರಿಂದ ನವೆಂಬರ್ 3 ರಂದು ಸರ್ಕಾರದ ಬರೆದ ಪತ್ರದ ಆಧಾರದಲ್ಲಿಯೇ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದು ದಲಿತ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ನನ್ನ ಗಮನಕ್ಕೆ ತಂದಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರ 2015 ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ 1995 ನಿಯಮವನ್ನೇ ಪಾಲಿಸುವಂತೆ ಸಂಬಂಧಿಸಿದವರಿಗೆ ಕೂಡಲೇ ಸೂಚನೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.