ಬೆಂಗಳೂರು: ಮಾಜಿ ಮುಖ್ಯಮಂತ್ರಿ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಸೋಮವಾರ ರಾತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಕೋವಿಡ್ ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ವರದಿಯಾಗಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದಿದ್ದಾರೆ.
ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಿದ್ದರಾಮಯ್ಯ ವಿನಂತಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿ, ನಿನ್ನೆ ಬೆಳಿಗ್ಗೆಯಿಂದ ತಂದೆಯವರಿಗೆ ಜ್ವರ ಬಂದಿದ್ದು, ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಟಿಜೆನ್ ಟೆಸ್ಟ್ ನಲ್ಲಿ ಅವರಿಗೆ ಕೋವಿಡ್ -19 ಸೋಂಕು ತಗುಲಿರುವು್ಉ ದೃಢವಾಗಿದೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ -19 ಸೋಂಕು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ರವಿವಾರ ರಾತ್ರಿ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು. ಬಿಎಸ್ ವೈ ಅವರ ಪುತ್ರಿ, ಕಾವೇರಿ ನಿವಾಸದ ಆರು ಮಂದಿಗೆ ಸೋಂಕು ಪತ್ತೆಯಾಗಿತ್ತು.