Advertisement

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

08:18 AM Jul 29, 2022 | Team Udayavani |

ಬೆಂಗಳೂರು:  ಬಿಜೆಪಿ ಹಾಗೂ ಆರೆಸ್ಸೆಸ್‌ನವರಿಗೆ ನನ್ನನ್ನು ಕಂಡರೆ ಭಯ. ಹೀಗಾಗಿ  ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ವ್ಯವಸ್ಥಿತ ಪಿತೂರಿ ನಿರಂತರವಾಗಿ ನಡೆಯುತ್ತಿದೆ. ದಾವಣಗೆರೆ ಸಮಾವೇಶವು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಆಯೋಜನೆಯಾಗಿಲ್ಲ. ಕಾಂಗ್ರೆಸ್‌ನಲ್ಲಿ ನನ್ನ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ  ಮುಖ್ಯಮಂತ್ರಿ ಪದವಿಗಾಗಿ ಕಿತ್ತಾಟವೂ ಇಲ್ಲ’

Advertisement

ಇವು ಮಾಜಿ ಮುಖ್ಯಮಂತ್ರಿ ಹಾಗೂ  ವಿಪಕ್ಷ ನಾಯಕ ಸಿದ್ದರಾಮಯ್ಯ  ಅವರ ಮಾತುಗಳು.

ದಾವಣಗೆರೆಯಲ್ಲಿ  ಆಯೋಜಿಸಿರುವ ಸಿದ್ದರಾಮಯ್ಯ -75 ಅಮೃತ ಮಹೋತ್ಸವ  ಸಹಿತ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ  “ಉದಯವಾಣಿ’ಗೆ ಸಂದರ್ಶನ ನೀಡಿದರು.

ಆ.3ದಾವಣಗೆರೆ ಸಮಾವೇಶ  ವಿವಾದವಾಗುತ್ತಿದೆಯಲ್ಲ?

ದಾವಣಗೆರೆ ಸಮಾವೇಶದ ಬಗ್ಗೆ ಅನಗತ್ಯವಾಗಿ ಪ್ರಚಾರ ಆಗುತ್ತಿದೆ. ಹುಟ್ಟುಹಬ್ಬ ಅನೇಕ ಜನ ಆಚರಿಸಿಕೊಂಡಿದ್ದಾರೆ. ಆಗ ಇಲ್ಲದ ಆಕ್ಷೇಪ ಈಗ ಯಾಕೆ? ನಾನು ಯಾವತ್ತೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ನನಗೆ 75 ವರ್ಷ ತುಂಬುತ್ತಿದ್ದು, ಮಹತ್ವದ ಘಟ್ಟ ಎಂದು  ಸ್ನೇಹಿತರು ಹಾಗೂ ಹಿತೈಷಿಗಳು ಮಾಡುತ್ತಿರುವ ಕಾರ್ಯಕ್ರಮಕ್ಕೆ ಒಪ್ಪಿಗೆ ಕೊಟ್ಟಿದ್ದೇನಷ್ಟೆ.

Advertisement

ನಿಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಸಮಾವೇಶವಂತೆ ?

ಮುಖ್ಯಮಂತ್ರಿಯಾಗುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಮೊದಲು ಕಾಂಗ್ರೆಸ್‌  ಅಧಿಕಾರಕ್ಕೆ ಬರಬೇಕು. ಬಳಿಕ ಶಾಸಕರು ನಾಯಕನನ್ನು  ಆಯ್ಕೆ ಮಾಡಬೇಕು. ಮುಖ್ಯಮಂತ್ರಿಯಾಗಿ ಬಿಂಬಿಸಿಕೊಳ್ಳಲು ಸಮಾವೇಶ ಮಾಡುತ್ತಿಲ್ಲ.

ಜಮೀರ್‌ ಅಹಮದ್‌ ಹೋದಲ್ಲೆಲ್ಲ ಅದನ್ನೇ ಹೇಳುತ್ತಿದ್ದಾರಲ್ಲ?

ಜಮೀರ್‌  ಹೇಳಿಕೆ ವಿಚಾರ ಮುಗಿದ ಅಧ್ಯಾಯ. ಅವರು  ಸ್ವಂತ ಅಭಿಪ್ರಾಯ ಎಂದು ಹೇಳಿದ್ದರು. ಆದರೂ ಅದನ್ನೂ ಮಾತನಾಡಬೇಡ ಎಂದು ಹೇಳಿದ್ದೇವೆ.

ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗೆ ಈಗಲೇ ಕಿತ್ತಾಟ ಪ್ರಾರಂಭವಾಯ್ತಾ?

ನನ್ನ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ  ಮುಖ್ಯಮಂತ್ರಿ ಪದವಿಗಾಗಿ ಕಿತ್ತಾಟವಿಲ್ಲ. ಹಾಗೆ ನೋಡಿದರೆ ಮುಖ್ಯಮಂತ್ರಿ ಕಿತ್ತಾಟ ಬಿಜೆಪಿಯಲ್ಲೇ ಜಾಸ್ತಿ.

ದಾವಣಗೆರೆ ಸಮಾವೇಶದಿಂದ ಕಾಂಗ್ರೆಸ್‌ ಇಬ್ಭಾಗ ಆಗುತ್ತದಂತೆ?

ಅದು ಬಿಜೆಪಿಯವರ ಹಗಲುಕನಸು, ಭ್ರಮೆ

ನೀವು ಹಿಂದೂ ವಿರೋಧಿಯಂತೆ?

ಅದು ನನ್ನನ್ನು ಕಂಡರೆ ಹೆದರುವ ಬಿಜೆಪಿ ಹಾಗೂ ಆರೆಸ್ಸೆಸ್‌ನವರು ವ್ಯವಸ್ಥಿತವಾಗಿ ಮಾಡುತ್ತಿರುವ ಅಪಪ್ರಚಾರ.  ನಾನು ಮುಖ್ಯಮಂತ್ರಿಯಾಗಿ ರೂಪಿಸಿದ ಕಾರ್ಯಕ್ರಮಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ.

ಕಾಂಗ್ರೆಸ್‌ ಆಂತರಿಕ ಸಮೀಕ್ಷೆಯಲ್ಲಿ 80 ಸೀಟು  ದಾಟುತ್ತಿಲ್ಲವಂತೆ ಹೌದಾ?

ಯಾರು ಹೇಳಿದ್ದು? ವಿದ್ಯುನ್ಮಾನ ಮಾಧ್ಯಮವೊಂದರ ಸಮೀಕ್ಷೆಯಲ್ಲಿ ನಾವೇ ಮುಂದಿದ್ದೇವೆ. ನನ್ನ ಪ್ರಕಾರ ಕನಿಷ್ಠ 130 ಸ್ಥಾನ ಗೆಲ್ಲುತ್ತೇವೆ. 150 ಗೆದ್ದರೂ ಆಶ್ಚರ್ಯವಿಲ್ಲ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವ ಅಂಶ ಮುಂದಿಟ್ಟು ಹೋಗಲಿದೆ?

ಡಾ| ಮನಮೋಹನ್‌ ಸಿಂಗ್‌ ಅವರ ಅವಧಿಯ ಯುಪಿಎ ಸರಕಾರ ಸಾಧನೆ, ನಮ್ಮ ಸರಕಾರದ ಸಾಧನೆ, ಬಿಜೆಪಿ ಸರಕಾರದ ಭ್ರಷ್ಟಾಚಾರ, ವೈಫ‌ಲ್ಯ, ಅಭಿವೃದ್ಧಿ ಶೂನ್ಯ ಮುಂತಾದವುಗಳನ್ನು ಮುಂದಿಟ್ಟುಕೊಂಡು ಹೋಗುತ್ತೇವೆ.

ಶೇ.40 ಪರ್ಸೆಂಟ್‌ ಆರೋಪದ ಬಗ್ಗೆ ದಾಖಲೆ ಕೊಡಿ ಎಂದು ಸಿಎಂ ಕೇಳಿದ್ದಾರೆ?

ಈಶ್ವರಪ್ಪ ಪ್ರಕರಣದಲ್ಲಿ  ಆತ್ಮಹತ್ಯೆ ಮಾಡಿಕೊಂಡ ಸಂತೋಷ್‌ ಪಾಟೀಲ್‌ ಡೆತ್‌ ನೋಟ್‌ನಲ್ಲೇ ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು.

ಕಾಂಗ್ರೆಸ್‌ಬಣ ರಾಜಕೀಯ ಬಗ್ಗೆ?

ಯಾವ ಬಣ ರಾಜಕೀಯವೂ ಇಲ್ಲ. ಕೋಲಾರ ಸಹಿತ ಕೆಲವೆಡೆ ಸಮಸ್ಯೆ ಇದೆ, ಚುನಾವಣೆಗೆ ಮೊದಲು ಸರಿ ಮಾಡಲಾಗುವುದು.

ಅಹಿಂದ ವರ್ಗ ಇಂದಿಗೂ ನಿಮ್ಮ ಜತೆಯಲ್ಲೇ ಇದೆಯಾ?

ಅಹಿಂದ ಸಮುದಾಯ ಹೆಚ್ಚಾಗಿ ಕಾಂಗ್ರೆಸ್‌ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇರೋದು ಕಾಂಗ್ರೆಸ್‌ಗೆ ಮಾತ್ರ. ಅಹಿಂದ ವರ್ಗದವರು ಕೆಲವರು ಟಿಕೆಟ್‌ ಸಿಗದಿದ್ದಾಗ ಹೋಗಿರಬಹುದು.  ಅವರು ಮತ್ತೆ  ಕಾಂಗ್ರೆಸ್‌ಗೆ ಬರಲಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಿಮ್ಮ ಸ್ಪರ್ಧೆ ಎಲ್ಲಿ?

ಸದ್ಯಕ್ಕೆ ನಾನು ಬಾದಾಮಿ ಎಂಎಲ್‌ಎ. ಚುನಾವಣೆಗೆ ಇನ್ನೂ ಸಮಯ ಇದೆ.  ಹಲವು ಕಡೆಗಳಿಂದ ಆಹ್ವಾನ ಬರುತ್ತಿದ್ದು, ಇನ್ನೂ ತೀರ್ಮಾನ ಮಾಡಿಲ್ಲ.

ಯಡಿಯೂರಪ್ಪ – ಸಿದ್ದರಾಮಯ್ಯ ನಡುವೆ ರಾಜಕೀಯ ಸಂಬಂಧ ಇದೆ ಎಂಬ ಮಾತಿನ ಬಗ್ಗೆ?

ಇದಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ. 1983ರಿಂದ ನಾವಿಬ್ಬರೂ ಪರಸ್ಪರ ವಿರುದ್ಧವಾಗಿ ರಾಜಕೀಯ ಮಾಡಿಕೊಂಡು ಬಂದಿರುವವರು. ಅವರಿಗೂ ನನಗೂ ರಾಜಕೀಯ ಹೊಂದಾಣಿಕೆ ಸಾಧ್ಯವೇ ಇಲ್ಲ.

ಬೇಕಂತಲೇ ಬಿಟ್ಟಿದ್ದೀರಾ? :

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಅವರ ಪಕ್ಷದ ಮೂವರು ಹತ್ಯೆಯಾದರು. ಅವರಿಗೆ ಯಾಕೆ ರಕ್ಷಣೆ ಯಾಕೆ ಕೊಡಲಿಲ್ಲ. ಗುಪ್ತದಳ ಹಾಗೂ ಪೊಲೀಸ್‌ ಇಲಾಖೆ ಏನು ಮಾಡುತ್ತಿತ್ತು? ಪಿಎಫ್ಐ, ಎಸ್‌ಡಿಪಿಐ ಕೈವಾಡ ಎಂದಾದರೆ ತತ್‌ಕ್ಷಣ ನಿಷೇಧಿಸಿ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದ್ದರೂ ಯಾಕೆ ನಿಷೇಧಿಸುತ್ತಿಲ್ಲ. ಬೇಕಂತಲೇ ಬಿಟ್ಟಿದ್ದೀರಾ? ಸಿದ್ದರಾಮಯ್ಯ,  ವಿಪಕ್ಷ ನಾಯಕ 

ಎಸ್‌.ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next