ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾದಾಮಿಯ ಶಾಸಕರು. ಕ್ಷೇತ್ರದ ಸಾರ್ವಜನಿಕರ ಸಂಪರ್ಕಕ್ಕಾಗಿ ಬಾದಾಮಿಯಲ್ಲೇ ಹೊಸದಾಗಿ ಮನೆಯೊಂದನ್ನು ಹುಡುಕಲು ತಮ್ಮ ಆಪ್ತರಿಗೆ ಸೂಚನೆ ಕೊಟ್ಟಿದ್ದಾರೆ.
ಸದ್ಯ ರಾಜ್ಯ ರಾಜಕೀಯ ವಿದ್ಯಮಾನ ಪೂರ್ಣಗೊಂಡ ಬಳಿಕ ಬಾದಾಮಿಗೆ ಆಗಮಿಸಿ ಮತದಾರರಿಗೆ ಕೃತಜ್ಞತೆ ಸಭೆಯೊಂದನ್ನು ಮಾಡುವುದರ ಜತೆಗೆ ಸಾಧ್ಯವಾದರೆ ಅದೇ ವೇಳೆ ಹೊಸ ಮನೆಯಲ್ಲಿ ಪೂಜೆ ಕೂಡ ನಡೆಸಲಿದ್ದಾರೆ.
ಗುರುವಾರವಷ್ಟೇ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಹಾಗೂ ಗುಳೇದಗುಡ್ಡ ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರಗೆ ದೂರವಾಣಿ ಮೂಲಕ ಮಾತನಾಡಿ, ಬಾದಾಮಿಯಲ್ಲಿ ಮನೆನೋಡು. ರಾಜಕೀಯ ಬೆಳವಣಿಗೆ ಮುಗಿದ ತಕ್ಷಣ ಬಾದಾಮಿಗೆ ಬರುತ್ತೇನೆ. ಬಾದಾಮಿ ಕೇಂದ್ರ ಸ್ಥಾನದಲ್ಲಿ ಒಂದು ಸಭೆ ಏರ್ಪಡಿಸಿ,ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆ ನಡೆಸೋಣ. ಜನರ ಸಂಪರ್ಕಕ್ಕೆ ಅನುಕೂಲವಾಗಲು ಸುಸಜ್ಜಿತ ಮನೆಯೊಂದನ್ನು ಬಾಡಿಗೆಗೆ ನೋಡು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ತಿಂಗಳಲ್ಲಿ ನಾಲ್ಕು ದಿನ ಬಾದಾಮಿಯಲ್ಲೇ ವಾಸ್ತವ್ಯ ಮಾಡಲು ಅವರು ನಿರ್ಧರಿಸಿದ್ದಾರೆ.ಸರ್ಕಾರದ ವತಿಯಿಂದ ತಾಪಂ ಕಚೇರಿ ಕಟ್ಟಡದಲ್ಲಿ ಒಂದು ಕಟ್ಟಡ ನೀಡಲಿದ್ದು, ಅದರ ಹೊರತಾಗಿ ಮನೆ ಇದ್ದರೆ ಎಲ್ಲ ಮುಖಂಡರು, ಕಾರ್ಯಕರ್ತರು, ಜನರು ಭೇಟಿ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ, ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಚುನಾವಣಾಧಿಕಾರಿಯಿಂದ ಅಧಿಕೃತವಾಗಿ ನೀಡುವ ಪ್ರಮಾಣ ಪತ್ರ ಪಡೆದಿಲ್ಲ. ಗೆದ್ದ ಅಭ್ಯರ್ಥಿ ಇಲ್ಲವೇ ಅವರ ಮತ ಎಣಿಕೆ ಏಜೆಂಟರು ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ.
ಹೀಗಾಗಿ,ಬಾದಾಮಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಮತ್ತು ಹೊಳೆಬಸು ಶೆಟ್ಟರ ಈ ಪ್ರಮಾಣ ಪತ್ರ ಪಡೆದಿದ್ದಾರೆ.
– ಶ್ರೀಶೈಲ ಕೆ.ಬಿರಾದಾರ