Advertisement

ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಿಲ್ಲ, ಮೋದಿ ನನಗೆ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ

09:05 PM Feb 22, 2023 | Team Udayavani |

ವಿಧಾನಸಭೆ: “ನಾನು ಚುನಾವಣೆಗೆ ನಿಲ್ಲುವುದಿಲ್ಲ. ಹೀಗಾಗಿ, ಈ ಸದನಕ್ಕೆ ಮತ್ತೆ ಬರಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ತರಲು ಸರ್ವ ಪ್ರಯತ್ನ ಮಾಡುತ್ತೇನೆ. ರಾಜ್ಯ ಸುತ್ತುತ್ತೇನೆ..’ -ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಾತುಗಳು.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಿಲ್ಲ, ನರೇಂದ್ರ ಮೋದಿ ನನಗೆ ಅನ್ಯಾಯ ಮಾಡಿಲ್ಲ. ನನಗೆ ಕೊಟ್ಟಷ್ಟು ಅವಕಾಶ ಬೇರೆ ಯಾರಿಗೂ ಕೊಟ್ಟಿಲ್ಲ. ನಾನು ಅವರಿಗೆ ಋಣಿ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಉತ್ತಮ ಬಜೆಟ್‌ ನೀಡಿದ್ದಾರೆ. ಪ್ರತಿಪಕ್ಷ ನಾಯಕರು ಬಜೆಟ್‌ನಲ್ಲಿನ ಒಳ್ಳೆಯ ಅಂಶಗಳನ್ನು ಶ್ಲಾ ಸಬೇಕಿತ್ತು. ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಕೊರತೆ ಬಜೆಟ್‌ ಮಂಡಿಸಿರುವುದು ಅವರಿಗೆ ಗೊತ್ತಿದೆ. ತೆರಿಗೆ ಆದಾಯ ಉತ್ತಮವಾಗಿದ್ದು ಆರ್ಥಿಕ ಶಿಸ್ತು ಇದೆ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮ ಜನರ ಮುಂದಿಟ್ಟು ನಮ್ಮ ಶಾಸಕರು ಮತ ಕೇಳಬೇಕೆಂದು ಹೇಳಿದರು.

ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಮ್ಮ ಶಾಸಕರು ಧೈರ್ಯದಿಂದ ಅಧಿವೇಶನ ಮುಗಿದ ತಕ್ಷಣ ಕ್ಷೇತ್ರಗಳಿಗೆ ಹೋಗಿ ಜನರ ವಿಶ್ವಾಸಗಳಿಸುವತ್ತ ಕೆಲಸ ಮಾಡಬೇಕೆಂದು ತಿಳಿಸಿದರು.

ಅನ್ಯಾಯ ಮಾಡಿಲ್ಲ: ಬಿಜೆಪಿ ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದೆ, ಕಡೆಗಣಿಸಿದೆ ಎಂಬ ಮಾತುಗಳು ಇವೆ. ಆದರೆ, ಬಿಜೆಪಿ ನನಗೆ ಕೊಟ್ಟಷ್ಟು ಅವಕಾಶ ಯಾರಿಗೂ ಕೊಡಲಿಲ್ಲ. ಸಾಕಷ್ಟು ಸ್ಥಾನಮಾನ ಕೊಟ್ಟಿದ್ದಾರೆ, ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದಕ್ಕಿಂತ ಬೇರೇನು ಬೇಕು ಎಂದು ಪ್ರಶ್ನಿಸಿದರು.

Advertisement

ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹಾಗೆಂದು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಮುಂದಿನ ಎರಡು ತಿಂಗಳು ವಿಶ್ರಾಂತಿ ಇಲ್ಲದೆ ರಾಜ್ಯ ಪ್ರವಾಸ ಮಾಡುತ್ತೇನೆ. ಶಾಸಕರು ಕರೆದಲ್ಲಿಗೆ ಹೋಗುತ್ತೇನೆ. ಆರೋಗ್ಯ ಇದ್ದರೆ ಈ ಚುನಾವಣೆಯಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆಂದು ಹೇಳಿದರು.

ಸ್ಪರ್ಧೆಗೆ ಒತ್ತಾಯ: ಯಡಿಯೂರಪ್ಪ ಅವರು ನಾನು ಸದನಕ್ಕೆ ಮತ್ತೆ ಬರಲು ಆಗದು, ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಾಗ, ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಯು.ಟಿ.ಖಾದರ್‌, ಜೆಡಿಎಸ್‌ನ ಶಿವಲಿಂಗೇಗೌಡ, ವೆಂಕಟರಾವ್‌ ನಾಡಗೌಡ, ನಿಮ್ಮ ಹಿರಿತನ, ಅನುಭವ, ಮಾರ್ಗದರ್ಶನ ಬೇಕು. ಮತ್ತೆ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡಿದರು.

ಪ್ರಿಯಾಂಕ್‌ ಖರ್ಗೆ ಅವರು, ದೆಹಲಿಯವರ ಮಾತು ಕೇಳಬೇಡಿ ಸಾರ್‌. ನೀವು ಚುನಾವಣೆಗೆ ಸ್ಪರ್ಧೆ ಮಾಡಿ ಎಂದು ಹೇಳಿದರು. ಯು.ಟಿ.ಖಾದರ್‌, ನಿಮ್ಮ ಪಕ್ಷ ನಿಷ್ಠೆ ಕೇವಲ ಬಿಜೆಪಿಯಷ್ಟೇ ಅಲ್ಲ ಎಲ್ಲರಿಗೂ ಮಾದರಿ. ಎಷ್ಟೇ ಅನ್ಯಾಯ, ಅಪಮಾನ ಆದರೂ ಪಕ್ಷವೇ ಮುಖ್ಯ ಎಂದು ಹೇಳುತ್ತಿದ್ದೀರಿ. ನೀವು ಪಕ್ಷದ ಮೇಲಿಟ್ಟಿರುವ ಪ್ರೀತಿಗೆ ಇಷ್ಟು ಸಾಕ್ಷಿ. ನೀವು ಮತ್ತೆ ಸ್ಪರ್ಧೆ ಮಾಡಿ ಇಲ್ಲಿಗೆ ಬರಬೇಕು ಎಂದು ತಿಳಿಸಿದರು.

ಆದರೆ, ಯಡಿಯೂರಪ್ಪ ಅವರು ಮತ್ತೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಆ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದುಗೆ ಬಿಎಸ್‌ವೈ ಟಾಂಗ್‌
ಬಾದಾಮಿಯಲ್ಲಿ ಜನ ಗೆಲ್ಲಿಸಿ ಮತ್ತೆ ಗೆಲ್ಲಿಸುತ್ತೇವೆ ಎಂದು ಹೇಳುವಾಗ ಸಿದ್ದರಾಮಯ್ಯ ಅವರು ಬೇರೆ ಕ್ಷೇತ್ರ ಹುಡುಕಾಟ ಮಾಡುವುದು ಅಲ್ಲಿನ ಜನರಿಗೆ ಮಾಡಿದ ದ್ರೋಹವಾಗುತ್ತದೆ. ಅಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರೆ ಗೆಲ್ಲುವ ವಿಶ್ವಾಸ ಇಲ್ಲ ಎಂದು ಅರ್ಥವೇ ಎಂದು ಯಡಿಯೂರಪ್ಪ ಕುಟುಕಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಬೇರೆ ಕ್ಷೇತ್ರ ಹುಡುಕಾಟ ಪ್ರಸ್ತಾಪಿಸಿ, ಬಾದಾಮಿ ಬಿಟ್ಟು ಬೇರೆ ಎಲ್ಲೇ ಸ್ಪರ್ಧೆ ಮಾಡಿದರೂ ಜನ ಒಪ್ಪಲ್ಲ, ಅಲ್ಲಿಂದ ಓಡಿ ಬಂದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಹೀಗಾಗಿ, ನಾನು ಸಲಹೆ ಮಾಡುತ್ತೇನೆ, ಬಾದಾಮಿಯಲ್ಲಿ ಸ್ಪರ್ಧಿಸಿ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಗೋವಿಂದ ಕಾರಜೋಳ, ಕಷ್ಟ ಕಾಲದಲ್ಲಿ ನನ್ನ ಜನ ಸಿದ್ದರಾಮಯ್ಯ ಅವರನ್ನು ಕೈ ಹಿಡಿದಿದ್ದಾರೆ. ಆದರೆ, ಇದೀಗ ಅವರನ್ನು ಬಿಟ್ಟು ಬೇರೆಡೆ ನೋಡುತ್ತಿದ್ದಾರೆ. ಇದು ಸರಿಯೇ ಎಂದು ಕೇಳಿದರು.

ಇದಕ್ಕೆ ಯು.ಟಿ.ಖಾದರ್‌, ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಬೇರೆಡೆ ಸ್ಪರ್ಧೆ ಮಾಡುತ್ತಿಲ್ಲ, ಚಾಮುಂಡೇಶ್ವರಿಯಲ್ಲಿ ನಿಂತರೂ ಗೆಲ್ಲುತ್ತಾರೆ, ಬಾದಾಮಿಯಲ್ಲೂ ಗೆಲ್ಲುತ್ತಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲೇ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ. ಅವರೊಬ್ಬ ಜನನಾಯಕ ಎಂದು ಹೇಳಿದರು.

ಇದಕ್ಕೆ ಯಡಿಯೂರಪ್ಪ ಅವರು, ನೀವು ನಿಮ್ಮ ಪಕ್ಷದ ನಾಯಕನ ಸಮರ್ಥನೆ ಮಾಡಿಕೊಳ್ಳುವುದು ತಪ್ಪಲ್ಲ, ಆದರೆ, ನನ್ನ ಪ್ರಕಾರ ಅವರು ಬಾದಾಮಿಯಲ್ಲೇ ಸ್ಪರ್ಧಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next