Advertisement

ನಾಡಿನ ಅಭಿವೃದ್ಧಿಗೆ ಪೂರ್ಣಾವಧಿ ಅಧಿಕಾರ ನೀಡಿ :  ಎಚ್‌.ಡಿ.ಕುಮಾರಸ್ವಾಮಿ

01:27 PM Aug 24, 2021 | Team Udayavani |

ಶಿರಹಟ್ಟಿ: ಸರಕಾರದಲ್ಲಿ ಹಣ, ಅನುದಾನಕ್ಕೆ ಯಾವತ್ತೂ ಬರವಿಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಆಡಳಿತಾರೂಢ ಸರಕಾರ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಬಡವರ ಮನೆ ಬಾಗಿಲಿಗೇ ಶಿಕ್ಷಣ, ರೈತರನ್ನು ಸಾಲ ಮುಕ್ತರನ್ನಾಗಿಸುವುದು, ಮತ್ತಿತರೆ ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ಅದಕ್ಕಾಗಿ ರಾಜ್ಯದ ಜನತೆ ತಮಗೆ 5 ವರ್ಷಗಳ ಪೂರ್ಣಾವ ಧಿ ಮುಖ್ಯಮಂತ್ರಿಯಾಗಿ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಮನವಿ ಮಾಡಿದರು.

Advertisement

ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 2018ರ ಚುಣಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸರಕಾರ 15 ಲಕ್ಷ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಪರವಾನಗಿ ನೀಡಿತು. ಅದಕ್ಕೆ 29 ಸಾವಿರ ಕೋಟಿ ರೂ. ಅವಶ್ಯಕತೆ ಇತ್ತು. ಆದರೆ, ಆಗ ಸರಕಾರದ ಬಳಿ ಇದ್ದದ್ದು ಕೇವಲ 2,800 ಕೋಟಿ ರೂ. ಮಾತ್ರ. ಇದೇ ಕಾರಣದಿಂದ ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಸರಕಾರದಿಂದ ಹಣ ಮಂಜೂರಾಗಿಲ್ಲ ಎಂದು ದೂರಿದರು.

ತಾವು 2ನೇ ಬಾರಿಗೆ ಮುಖ್ಯಮಂತ್ರಿಯಾದಾಗ ರೈತರ ಸಾಲ ಮನ್ನಾ ಮಾಡುವ ಜವಾಬ್ದಾರಿಯಿತ್ತು. ಅದಕ್ಕಾಗಿ ಹಣ ಹೊಂದಿಸುವ ಭರದಲ್ಲಿ ಅಂಗನವಾಡಿ ಕಾರ್ಯಕತೆಯರು, ಬಿಸಿಯೂಟ ಕಾರ್ಯಕರ್ತೆಯರು, ಕಾರ್ಮಿಕರ ವೇತನ ಹೆಚ್ಚಿಸುವಲ್ಲಿ ತೊಂದರೆಯಾಯಿತು. ಇನ್ನೊಂದು ವರ್ಷ ಮಖ್ಯಮಂತ್ರಿಯಾಗಿದ್ದರೆ ಎಲ್ಲವನ್ನೂ ಸರಿಪಡಿಸುತ್ತಿದ್ದೆ ಎಂದು ಹೇಳಿದರು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ತಾವು ರಾಜ್ಯದ ಅಭಿವೃದ್ಧಿಯ ಗತಿ, ಜನರ ಜೀವನ ಮಟ್ಟದ ನೈಜತೆಯನ್ನು ಅರಿಯಲು ಗ್ರಾಮ ವಾಸ್ತವ್ಯ ನಡೆಸಿದ್ದರಿಂದ ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಯಿತು. ಅದರ ಭಾಗವಾಗಿ ಸುಗನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿದ್ದಾಗ ಗ್ರಾಮಸ್ಥರು ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದರು. ಆ ಪೈಕಿ ಗ್ರಾಮದ ಆಲದಮ್ಮನ ಕೆರೆ ಅಭಿವೃದ್ಧಿ ಪ್ರಮುಖವಾಗಿತ್ತು. ಆಗ ನೀಡಿದ್ದ ಭರವಸೆಯನ್ನು ಈಡೇರಿಸಲು 2019ರ ಸಮ್ಮಿಶ್ರ ಸರಕಾರದಲ್ಲಿ ಅವಕಾಶ ಕೂಡಿ ಬಂದಿತ್ತು. ಅದಕ್ಕಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಸ್ಥಳೀಯ ಶಾಸಕ ರಾಮಣ್ಣ ಲಮಾಣಿ ಅವರ ಆಹ್ವಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ಸ್ಪಂದನೆ ಮೇರೆಗೆ ಇವತ್ತಿನ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದೆ. ಆದರೆ, ಇದೀಗ ಏಕಾಏಕಿ ಕಾರ್ಯಕ್ರಮವನ್ನು ಮುಂದೂಡಿ, ಗೈರಾಗಿದ್ದಾರೆ. ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಸರಕಾರಕ್ಕಿಂತ ಜೆಡಿಎಸ್‌ ಘನತೆ ಹೆಚ್ಚುತ್ತದೆ ಎಂಬ ಭಾವನೆ ತಳೆಯುವ ಅಗತ್ಯವಿಲ್ಲ. ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ಸಂತೃಪ್ತಿಯಷ್ಟೇ ನನಗೆ ಸಾಕು. ಭೂಮಿ ಪೂಜೆ ಕಾರ್ಯಕ್ರಮವನ್ನು ನೀವೇ ಮಾಡಿಕೊಳ್ಳಿ. ಆದರೆ, ರೈತರ ಅನುಕೂಲಕ್ಕಾಗಿ ಕೆರೆ ಅಭಿವೃದ್ಧಿ, ನೀರು ತುಂಬಿಸುವ ಕೆಲಸವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ವೇದಿಕೆ ಮೇಲೆ ಮಾಜಿ ಶಾಸಕ ಎನ್‌. ಎಚ್‌.ಕೋನರಡ್ಡಿ, ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಹೊಂಬಾಳಿಮಠ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಪ್ರಭುಗೌಡ ಪಾಟೀಲ, ನಾಗಪ್ಪ ಓಲೇಕಾರ, ವಿರೂಪಾಕ್ಷಪ್ಪ ರಾಹುತ, ಹನುಮಪ್ಪ ಆಡಿನ, ವೀರನಗೌಡ ಪಾಟೀಲ ಹಾಗೂ ಸುಗನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next