ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ(86ವರ್ಷ) ಸೋಮವಾರ(ನವೆಂಬರ್ 23, 2020) ಸಂಜೆ ವಿಧಿವಶರಾಗಿರುವುದಾಗಿ ಆರೋಗ್ಯ ಸಚಿವ ಹಿಮಂತಾ ಬಿಸ್ವಾ ತಿಳಿಸಿದ್ದಾರೆ.
ತರುಣ್ ಗೊಗೊಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ ಸತತ ಮೂರು ಬಾರಿ ದಾಖಲೆಯ ಜಯ ಸಾಧಿಸಿತ್ತು. ಇದರೊಂದಿಗೆ ಗೊಗೊಯಿ ಅವರು 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಅಸ್ಸಾಂನಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಕೀರ್ತಿ ಗೊಗೊಯಿ ಅವರದ್ದಾಗಿದೆ.
ತರುಣ್ ಗೊಗೊಯಿ ಅವರು ಆರು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 1971ರಿಂದ 1985ರವರೆಗೆ ಜೋರ್ಹಾಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 1991ರಿಂದ 1998-2002ರವರೆಗೆ ಕಾಲಿಯಾಬೋರ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1976ರಲ್ಲಿ ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಧಾನಿ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು. ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಗೊಗೊಯಿ ಆಹಾರ ಮತ್ತು ಆಹಾರ ಸಂಸ್ಕರಣಾ ರಾಜ್ಯ ಖಾತೆ ಸಚಿವರಾಗಿದ್ದರು.
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ಮುಖ್ಯಮಂತ್ರಿ ಸರ್ಬಾನಂದಾ ಸೊನೊವಾಲ್ ಸೋಮವಾರ(ನವೆಂಬರ್ 23, 2020)ಬೆಳಗ್ಗೆ ತಿಳಿಸಿದ್ದರು.
ಕಾಂಗ್ರೆಸ್ ಮುಖಂಡ ಗೊಗೊಯಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಗೊಗೊಯಿ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ದಿಬ್ರುಗಢ್ ನಲ್ಲಿನ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ರದ್ದುಗೊಳಿಸಿ ಗುವಾಹಟಿಗೆ ವಾಪಸ್ ಆಗಿರುವುದಾಗಿ ಸರ್ಬಾನಂದಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ತರುಣ್ ಗೊಗೊಯಿ ನನಗೆ ಯಾವತ್ತೂ ತಂದೆಯ ಸಮಾನ. ಅವರ ಆರೋಗ್ಯ ಚೇತರಿಗಾಗಿ ಪ್ರಾರ್ಥಿಸುವ ಲಕ್ಷಾಂತರ ಜನರ ಜತೆ ನಾನೂ ಕೂಡಾ ಭಾಗಿಯಾಗುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದ್ದರು.