Advertisement

ಕರಾವಳಿ ಅಭಿವೃದ್ಧಿಗೆ ವಿಷನ್‌ ಗ್ರೂಪ್‌ ರಚನೆ

12:10 AM Mar 30, 2021 | Team Udayavani |

ಬೆಂಗಳೂರು: ರಾಜ್ಯದ ಕಡಲ ತೀರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಆರ್ಥಿಕ, ವಾಣಿಜ್ಯ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತ್ಯೇಕ “ವಿಷನ್‌ ಗ್ರೂಪ್‌’ ರಚನೆ ಪ್ರಕ್ರಿಯೆ ಆರಂಭವಾಗಿದೆ.

Advertisement

ಈ ಸಂಬಂಧ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಫಿಕ್ಕಿ) ಮಾಡಿರುವ ಮನವಿಗೆ ಸಚಿವ ಜಗದೀಶ ಶೆಟ್ಟರ್‌ ಸ್ಪಂದಿಸಿದ್ದು, ಅವರ ಸೂಚನೆಯಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಸ್ತಾವ ಸಿದ್ಧಪಡಿಸುತ್ತಿದೆ. ಸರಕಾರದ ಒಪ್ಪಿಗೆ ದೊರೆತರೆ ಕರಾವಳಿ ಅಭಿವೃದ್ಧಿ ವಿಷನ್‌ ಗ್ರೂಪ್‌ ರಚನೆಯಾಗಲಿದ್ದು, ಕರಾವಳಿಯಲ್ಲಿ ಅಭಿವೃದ್ಧಿಯ ಗಾಳಿ ಬಲವಾಗಿ ಬೀಸುವ ಆಶಯ ಮೂಡಿದೆ.

ರಾಜ್ಯ ಸುಮಾರು 320 ಕಿ.ಮೀ. ಉದ್ದದ ಕಡಲ ಕಿನಾರೆ ಹೊಂದಿದೆ. ಈ ಪ್ರದೇಶವನ್ನು ಇನ್ನಷ್ಟು ಯೋಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಲು, ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪೂರಕವಾದ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರತ್ಯೇಕ “ವಿಷನ್‌ ಗ್ರೂಪ್‌’ ರಚನೆಗೆ ಸಿದ್ಧತೆ ನಡೆದಿದೆ.

ಫಿಕ್ಕಿಯು ಇತ್ತೀಚೆಗೆ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಕರಾವಳಿ ಪ್ರದೇಶ ಅಭಿವೃದ್ಧಿ ಬಗ್ಗೆ ಚರ್ಚೆ ಯಾಗಿತ್ತು. ಆ ಬಳಿಕ “ಫಿಕ್ಕಿ’ ಕರ್ನಾಟಕ ಘಟಕವು ವಿಷನ್‌ ಗ್ರೂಪ್‌ ರಚಿಸುವಂತೆ ಕೋರಿ ಸಚಿವರಿಗೆ ಪತ್ರ ಬರೆದಿತ್ತು. ಈ ಗ್ರೂಪ್‌ಗೆ “ಫಿಕ್ಕಿ’ ರಾಜ್ಯ ಘಟಕದ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಒಳಗೊಂಡಂತೆ 16 ಮಂದಿಯ ಹೆಸರನ್ನು ಶಿಫಾರಸು ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ, ಕೈಗಾರಿಕೆ, ಮೀನುಗಾರಿಕೆ ಕಾಲೇಜು, ಸಣ್ಣ ಕೈಗಾರಿಕೆ, ಕರಾವಳಿ ಖಾದ್ಯ, ಮತ್ಸೋದ್ಯಮ, ಪ್ರವಾಸೋದ್ಯಮ- ಆತಿಥ್ಯ, ರಿಯಲ್‌ ಎಸ್ಟೇಟ್‌, ಎಫ್ಎಂಸಿಜಿ ಸಹಿತ ವಿವಿಧ ವಲಯಗಳ ಪ್ರಮುಖರು ಪಟ್ಟಿಯಲ್ಲಿದ್ದಾರೆ.

ವಿಷನ್‌ ಗ್ರೂಪ್‌ ಉದ್ದೇಶ ಏನು?
– ಪ್ರಧಾನವಾಗಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಅಭಿ ವೃದ್ಧಿಗೆ ಆದ್ಯತೆ ನೀಡುವುದು.
– ಧಾರ್ಮಿಕ, ಅಕ್ವಾ ಟೂರಿಸಂ, ಕ್ರೂಸ್‌ ವ್ಯವಸ್ಥೆಗೆ ಉತ್ತೇಜನ ನೀಡುವುದು.
– ಬ್ಯಾಂಕಿಂಗ್‌, ಶಿಕ್ಷಣ ಕ್ಷೇತ್ರ ಗಳನ್ನು ಉತ್ತೇಜಿಸಲು ಪೂರಕ ಯೋಜನೆಗಳನ್ನು ರೂಪಿಸುವುದು.

Advertisement

ರಾಜ್ಯದ ಕರಾವಳಿ ಅಭಿವೃದ್ಧಿಗೆ ಸೀಮಿತವಾಗಿ ವಿಷನ್‌ ಗ್ರೂಪ್‌ ರಚಿಸಲು ನಿರ್ಧರಿಸಲಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಸ್ತಾವವಾಗಿತ್ತು. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಯಾವ ರೀತಿಯ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಲು ವಿಷನ್‌ ಗ್ರೂಪ್‌ ರಚನೆ ಪ್ರಕ್ರಿಯೆ ನಡೆದಿದೆ.

– ಜಗದೀಶ ಶೆಟ್ಟರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next