Advertisement

ನೀತಿ ಸಂಹಿತೆ ಉಲ್ಲಂಘನೆ ತಪಾಸಣೆಗೆ ತಂಡಗಳ ರಚನೆ

12:20 PM Mar 30, 2018 | Team Udayavani |

ಹೊಸಕೋಟೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮಾ.27ರಿಂದ ಜಾರಿಗೊಂಡಿರುವ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳನ್ನು ತಪಾಸಣೆ ಮಾಡಲು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ತಹಶೀಲ್ದಾರ್‌, ಸಹಾಯಕ ಚುನಾವಣಾಧಿಕಾರಿ ನಾರಾಯಣ ವಿಠಲ್‌ ತಿಳಿಸಿದ್ದಾರೆ.

Advertisement

ಸರ್ಕಾರದ ವಿವಿಧ ಇಲಾಖೆಗಳ 36 ಅಧಿಕಾರಿ, ಸಿಬ್ಬಂದಿ, ಪೊಲೀಸರನ್ನು ಒಳಗೊಂಡ 9 ಸಂಚಾರ ತಂಡ ರಚಿಸಲಾಗಿದ್ದು 3 ಪಾಳಿಗಳಲ್ಲಿ 24 ಗಂಟೆಗಳೂ ಕಾರ್ಯನಿರ್ವಹಿಸುವರು. ವಾಹನಗಳಲ್ಲಿ ಅಕ್ರಮವಾಗಿ ಹಣ, ಮಾದಕ ವಸ್ತು, ಉಡುಗೊರೆಯಂತಹ ವಸ್ತುಗಳನ್ನು ಸಾಗಣೆ ಮಾಡುವುದನ್ನು ಪತ್ತೆಹಚ್ಚಲು ಗಡಿ ಪ್ರದೇಶಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಲು 5 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು ಅಧಿಕಾರಿಗಳೊಂದಿಗೆ ಸೂಕ್ತ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಇದರೊಂದಿಗೆ ಸಹಾಯಕ ವೆಚ್ಚ ಪರಿವೀಕ್ಷಕರನ್ನು ನೇಮಿಸಿದ್ದು ಯಾವುದೇ ಸಭೆ, ಸಮಾರಂಭಗಳನ್ನು ವಿಡಿಯೋ ಮಾಡಲು 3 ವಿಡಿಯೋ ಸರ್ವೇಲೆನ್ಸ್‌ ತಂಡ, 3 ವೀಕ್ಷಣಾ ತಂಡಗಳನ್ನು ರಚಿಸಲಾಗಿದೆ. ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟಂತೆ ಮುದ್ರಣ, ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ಜಾಹೀರಾತುಗಳ ಬಗ್ಗೆಯೂ ನಿಗಾವಹಿಸಿ ಯಾವುದೇ ಹಣ ಪಡೆದು ಪ್ರಕಟಿಸಿದ ಸುದ್ದಿಗಳ ಬಗ್ಗೆ ಸಲ್ಲಿಸುವ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು.

ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಆಯಾ ಗ್ರಾಪಂ ಸಿಬ್ಬಂದಿ, ಪಟ್ಟಣದ ವ್ಯಾಪ್ತಿಯಲ್ಲಿ ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಆದರೂ ಯಾವುದೇ ಶಾಶ್ವತವಾಗಿ ಅಳವಡಿಸಿರುವ ನಾಮಫ‌ಲಕಗಳಲ್ಲಿ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರಗಳಿದ್ದಲ್ಲಿ ಅವುಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ. ಯಾವುದೇ ಸಾರ್ವಜನಿಕ ಸಭೆ, ಕಾರ್ಯಕ್ರಮಗಳನ್ನು ಏರ್ಪಡಿಸಲು ಮುಂಚಿತವಾಗಿಯೇ ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಲಿಖೀತ ಅನುಮತಿ ಪಡೆಯಬೇಕಾಗಿದೆ.

ಸಾಮಾನ್ಯ ಧಾರ್ಮಿಕ ಕಾರ್ಯಗಳಿಗೆ ಅನುಮತಿ ಅವಶ್ಯವಿಲ್ಲವಾದರೂ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಲ್ಲಿ ಪೂರ್ವಾನುಮತಿ ಪಡೆಯಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಧ್ವನಿವರ್ಧಕ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಆಯೋಗದ ಸೂಚನೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next