ಮೈಸೂರು: ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ತಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ತಡೆಗಟ್ಟಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ಚಿರತೆ ಕಾರ್ಯಪಡೆಯನ್ನು ರಚಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಚಿರತೆ ಹಾವಳಿ ತಡೆಗಟ್ಟುವ ಕಾರ್ಯಪಡೆಯಲ್ಲಿ 58 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಪ್ರಾದೇಶಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ, ನಾಲ್ವರು ಉಪ ವಲಯ ಅರಣ್ಯ ಅಧಿಕಾರಿ, ಎಂಟು ಮಂದಿ ಗಸ್ತು ಅರಣ್ಯ ಪಾಲಕರು, 40 ಮಂದಿ ಸಹಾಯಕರು, ಐವರು ವಾಹನ ಚಾಲಕರು ಈ ಕಾರ್ಯಪಡೆಯಲ್ಲಿದ್ದಾರೆ.
ಈ ಕಾರ್ಯಪಡೆಯು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವ ಮತ್ತು ನಿರ್ದೇಶನದಡಿ ಕಾರ್ಯ ನಿರ್ವಹಿಸಲಿದೆ. ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ನಾಲ್ಕು ತಂಡಗಳಾಗಿ ಪ್ರತಿ ತಂಡದಲ್ಲಿ ಇಬ್ಬರು ಗಸ್ತು ಅರಣ್ಯ ಪಾಲಕರು, ಒಬ್ಬ ವಾಹನ ಚಾಲಕ, ಹತ್ತು ಹೊರ ಗುತ್ತಿಗೆ ನೌಕರರು ಇರಲಿದ್ದಾರೆ. ಈ ಕಾರ್ಯಪಡೆಯ ನಿಯಂತ್ರಣ ಕೊಠಡಿ ಮೈಸೂರಿನಲ್ಲಿರುವ ಅರಣ್ಯ ಭವನದಲ್ಲಿ ಇರಲಿದೆ.