ಚಿತ್ರದುರ್ಗ: ಇಲ್ಲಿನ ಐತಿಹಾಸಿಕ ಮುರುಘಾ ಮಠಕ್ಕೆ ಸರ್ಕಾರ ನೇಮಿಸಿದ್ದ ಆಡಳಿತಾ ಧಿಕಾರಿಯನ್ನು ಹೈಕೋರ್ಟ್ ವಜಾ ಮಾಡಿದ ಹಿನ್ನೆಲೆಯಲ್ಲಿ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನೂತನ ಕಾರ್ಯಕಾರಿ ರಚಿಸಲು ಭಾನುವಾರ ಭಕ್ತರ ಸಭೆ ನಡೆಯಿತು.
ಆಡಳಿತಾಧಿಕಾರಿ ನೇಮಕ ಆದೇಶ ರದ್ದು ಮಾಡಿರುವ ಹೈಕೋರ್ಟ್, ಶಿವಮೂರ್ತಿ ಮುರುಘಾ ಶರಣರಿಂದ ಜಿಪಿಎ ಪಡೆದಿರುವ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ರಚಿಸಿ ಮಠದ ಆಡಳಿತ ಮುಂದುವರಿಸಲು ಸೂಚಿಸಿದೆ. ಈ ನಿಟ್ಟಿನಲ್ಲಿ ಸಮಿತಿ ರಚನೆಯಾಗಿದ್ದು, ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಬಸವಪ್ರಭು ಶ್ರೀಗಳು ತಿಳಿಸಿದರು.
ಸಭೆಯ ಆರಂಭದಲ್ಲಿ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಮಾತನಾಡಿ, ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ ವಿದ್ಯಾಪೀಠ ಹಾಗೂ ಮಠದ ಪೂಜೆ ಮತ್ತು ಆಡಳಿತ ನಡೆಸಿಕೊಂಡು ಹೋಗಲು ಎಲ್ಲರ ಸಮ್ಮತಿ ಇದೆಯೇ ಎಂದು ಸಭೆಯನ್ನು ಕೇಳಿದರು. ಈ ವೇಳೆ ಒಬ್ಬರ ಅಪಸ್ವರ ಹೊರತುಪಡಿಸಿ, ಸರ್ವಾನುಮತದ ಒಪ್ಪಿಗೆ ದೊರೆಯಿತು.
ಈ ವೇಳೆ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಠದ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ನೀಡಿರುವ ತೀರ್ಪು ದೇಶದ ಎಲ್ಲ ಮಠ, ಮಂದಿರಗಳಿಗೂ ರಕ್ಷಣೆಯಾಗಿದೆ. ನಾವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಶಿವಮೂರ್ತಿ ಮುರುಘಾ ಶರಣರು ನೀಡಿರುವ ಜಿಪಿಎ ಅನುಸಾರ ಎಲ್ಲ ಜವಾಬ್ದಾರಿಗಳನ್ನು ಕಾರ್ಯಕಾರಿ ಸಮಿತಿ ಹಾಗೂ ಭಕ್ತರ ಸಲಹೆ, ಸಹಕಾರ ಪಡೆದು ಉತ್ತಮವಾಗಿ ನಿಭಾಯಿಸಿಕೊಂಡು ಹೋಗಲಾಗುವುದು. ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೂತನ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್, ಮುಖಂಡರಾದ ಎಸ್.ಎಂ.ಎಲ್ ತಿಪ್ಪೇಸ್ವಾಮಿ, ಶ್ರೀರಾಮ್, ಆನಂದಪ್ಪ, ಮಲ್ಲಿಕಾರ್ಜುನ್, ಕೆ.ಎನ್. ವಿಶ್ವನಾಥಯ್ಯ, ಉಮೇಶ್ ಮತ್ತಿತರರು ಭಾಗವಹಿಸಿದ್ದರು.