ಚಿಂಚೋಳಿ: ತಾಲೂಕಿನಲ್ಲಿ ಬಾಲ್ಯ ವಿವಾಹ ನಡೆಯದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಎಚ್ಚರಿಕೆ ವಹಿಸಬೇಕು. ಅಂತಹ ಪ್ರಕರಣಗಳು ನಡೆದರೆ ತಕ್ಷಣವೇ ತಾಲೂಕು ಆಡಳಿತ ಗಮನಕ್ಕೆ ತರಬೇಕು. ಇದಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಹಶೀಲ್ದಾರ್ ಅಂಜುಮ ತಬಸುಮ ತಿಳಿಸಿದರು.
ತಹಶೀಲ್ದಾರ್ ಕಚೇರಿ ಎದುರು ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಅಭಿಯಾನ ಕುರಿತು ವಿಡಿಯೋ ಆನ್ ವ್ಹೀಲ್ಸ್ ಚಾಲನಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ತಾಲೂಕಿನ ಯಾವುದೇ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದರೆ ಅಂತಹವರ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ಅಪರಾಧ ಜಾಮೀನು ರಹಿತವಾಗಿರುತ್ತದೆ. ಕರ್ನಾಟಕ ತಿದ್ದುಪಡಿ ಅಧಿನಿಯಮ 2016ರ ಪ್ರಕಾರ ಒಂದು ವರ್ಷದಿಂದ ಎರಡು ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡಕ್ಕೆ ಗುರಿಯಾಗುತ್ತಾರೆ ಎಂದರು.
ಬಾಲ್ಯ ವಿವಾಹ ನಡೆಸುವವರು, ಪ್ರೇರೇಪಿಸುವವರಿಗೆ ಮತ್ತು ಬಾಲ್ಯ ವಿವಾಹದಲ್ಲಿ ಹಾಜರಿದ್ದವರೆಲ್ಲರೂ ಶಿಕ್ಷೆಗೆ ಗುರಿಯಾಗುತ್ತಾರೆ. ಬಾಲ್ಯ ವಿವಾಹ ತಡೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯವಿವಾಹ ನಿಷೇಧ ಮತ್ತು ಶಿಕ್ಷೆ, ದಂಡ ಕುರಿತು ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮೇಲ್ವಿಚಾರಕಿ ಪ್ರತಿಜ್ಞಾ ಪ್ರಮಾಣ ವಚನ ಬೋಧಿಸಿದರು. ಮೇಲ್ವಿಚಾರಕಿ ಮೀನಾಕ್ಷಿ ಗೌನಳ್ಳಿ, ಕಾರ್ಯಕರ್ತೆಯರಾದ ತಬೀತಾ ಕಟ್ಟಿ, ಮಗದೂಮ, ಭೀಮರೆಡ್ಡಿ ಮುನ್ನೂರ, ಅಡುಗೆ ಸಹಾಯಕರು ಇದ್ದರು.