Advertisement

ಕೃಷ್ಣಾ ನೀರಿಗಾಗಿ ಮತ್ತೆ ರೊಚ್ಚಿಗೆದ್ದ ರೈತರು

02:04 PM May 03, 2019 | Team Udayavani |

ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕುಡಿಯಲು ನೀರು ಬಿಡಬೇಕೆಂದು ಒತ್ತಾಯಿಸಿ ನದಿ ಪಾತ್ರದ ನಾಲ್ಕೈದು ಗ್ರಾಮಗಳ ಸಾವಿರಾರು ಜನರು ಅಂಕಲಿ-ಮಾಂಜರಿ ಬಳಿ ಕೃಷ್ಣಾ ನದಿ ಸೇತುವೆ ಮೇಲೆ ಗುರುವಾರ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಕಳೆದ ಎರಡು ತಿಂಗಳಿಂದ ಕೃಷ್ಣಾ ನದಿ ಬತ್ತಿ ಬರಿದಾಗಿ ಹೋಗಿದೆ. ನದಿ ಪಾತ್ರದ ಜನ ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಗಡಿ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳದಿಂದ ಜನ ಕಂಗಾಲಾಗಿದ್ದಾರೆ. ಇದರಿಂದ ಕೃಷ್ಣಾ ನದಿಗೆ ಶೀಘ್ರ ನೀರು ಹರಿಸಬೇಕೆಂದು ಕೃಷ್ಣಾ ನದಿ ಪಾತ್ರದ ಯಡೂರ, ಕಲ್ಲೋಳ, ಅಂಕಲಿ, ಮಾಂಜರಿ, ದಿಗ್ಗೇವಾಡಿ, ಬಾವನಸವದತ್ತಿ ಮುಂತಾದ ಗ್ರಾಮಗಳ ಜನರು ಅಂಕಲಿ-ಮಾಂಜರಿ ನಡುವೆ ಇರುವ ಕೃಷ್ಣಾ ನದಿ ಸೇತುವೆ ಮೇಲೆ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಮೈತ್ರಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ತಿಂಗಳಿಂದ ನದಿಯಲ್ಲಿ ನೀರು ಇಲ್ಲದೇ ಜನ ಜಾನುವಾರು ಹನಿ ನೀರಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ. ಹೀಗಾಗಿ ಗುರುವಾರ ರೊಚ್ಚಿಗೆದ್ದ ಜನರು ಹಠಾತ್ತನೇ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಬಲ ತುಂಬಿದ ಜೊಲ್ಲೆ,ಕೋರೆ: ಕೃಷ್ಣಾ ನದಿಗೆ ನೀರು ಬಿಡಬೇಕೆಂದು ಡಾ. ಪ್ರಭಾಕರ ಕೋರೆ ನೇತೃತ್ವದ ನಿಯೋಗ ಮಹಾರಾಷ್ಟ್ರದ ಸರ್ಕಾರದ ಜೊತೆ ಅನೇಕ ಬಾರಿ ಮಾತುಕತೆ ನಡೆಸಿದರೂ ನದಿಗೆ ನೀರು ಬಂದಿಲ್ಲ, ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪ್ರತಿಭಟನೆಯನ್ನು ಬೆಂಬಲಿಸಿದರು.

ರೇಸಾರ್ಟ್‌ ರಾಜಕಾರಣ ಬಿಡಿ ಅಭಿವೃದ್ಧಿಗೆ ಒತ್ತು ನೀಡಿ: ನದಿಯಲ್ಲಿ ನೀರು ಇಲ್ಲದೆ ಗಡಿ ಭಾಗದ ಜನ ಹನಿ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್‌ ಸೇರಿಕೊಂಡು ಸಮಸ್ಯೆಯತ್ತ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಧಿಕಾರಿಗಳು ಜೀಪ್‌ಗೆ ಮುತ್ತಿಗೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ಸೋಮಲಿಂಗ ಗೇಣ್ಣೂರ ಹಾಗೂ ತಹಶೀಲ್ದಾರ್‌ ಡಾ| ಸಂತೋಷ ಬಿರಾದಾರ ವಾಹನಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ನದಿಗೆ ನೀರು ಯಾಕೆ ಬಿಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮಾತನಾಡಿ, ನದಿಗೆ ನೀರು ಬಿಡುವ ವಿಚಾರಕ್ಕೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಶೀಘ್ರ ನದಿಗೆ ನೀರು ಬರುತ್ತದೆ ಕೂಡಲೇ ಪ್ರತಿಭಟನೆ ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದಾಗ ಉಪವಿಭಾಗಾಧಿಕಾರಿ ಭರವಸೆ ಮೇರೆಗೆ ಜನರು ಪ್ರತಿಭಟನೆ ವಾಪಸು ಪಡೆದರು.

ಪ್ರತಿಭಟನೆಯಲ್ಲಿ ರಾಜ್ಯಸಭೆ ಸದಸ್ಯ ಡಾ| ಪ್ರಭಾಕರ ಕೋರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಡಿಕೆಎಸ್‌ಎಸ್‌ಕೆ ನಿರ್ದೇಶಕರಾದ ಭರತ ಬಣವನೆ, ಅಜೀತ ದೇಸಾಯಿ, ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ತುಕಾರಾಮ ಪಾಟೀಲ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next