Advertisement
ಪೆರುವಾಜೆ ಗ್ರಾ.ಪಂ. ವ್ಯಾಪ್ತಿಯ ಪೆರುವಾಜೆ ಗ್ರಾಮದಲ್ಲಿ ಹರಿಯುವ ಗೌರಿ ಹೊಳೆಯಲ್ಲಿ ಬೇಸಗೆ ಕಾಲದಲ್ಲಿ ನೀರಿನ ಆಧಾರಕ್ಕೆಂದು ಅಡ್ಯತಕಂಡ ಎಂಬಲ್ಲಿ ಕಟ್ಟಲಾದ ಹಾಗೂ ಚೆನ್ನಾವರ ಎಂಬಲ್ಲಿ ಕಟ್ಟಲು ಉದ್ದೇಶಿಸಿದ ಎರಡು ಕಿಂಡಿ ಅಣೆಕಟ್ಟುಗಳು ಅಪೂರ್ಣವಾಗಿರುವ ಕಥೆ. ಇದರಿಂದ ಈ ಬೇಸಗೆಯಲ್ಲೂ ಹನಿ ನೀರಿಗೆ ಈ ಭಾಗದ ಜನರ ಪರದಾಟ ಮುಂದುವರಿಯಲಿದೆ.
ಅಡ್ಯತಕಂಡ ಬಳಿ ನಿರ್ಮಾಣಗೊಂಡಿದ್ದ ಕಿಂಡಿ ಅಣೆಕಟ್ಟು ಕುಸಿದು ಬರೋಬ್ಬರಿ 10 ವರ್ಷಗಳೇ ಕಳೆದಿವೆ. 1999ರಲ್ಲಿ ನಿರ್ಮಿಸಿದ ಈ ಕಟ್ಟ 2008ರಲ್ಲಿ ನಿರುಪಯುಕ್ತ ಸ್ಥಿತಿಗೆ ತಲುಪಿತ್ತು. ಹಲವು ಕುಟುಂಬಗಳ ಕೃಷಿ ಭೂಮಿ ಮತ್ತು ಕುಡಿಯುವ ನೀರಿಗೆ ನೀರಾವರಿ ಮೂಲವಾಗಿದ್ದ ಈ ಕಟ್ಟ ಪುನರುಜ್ಜೀವನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಸಣ್ಣ ನೀರಾವರಿ ಇಲಾಖೆ, ಕ್ಷೇತ್ರದ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಹೀಗಾಗಿ ಸಂಗ್ರಹಿಸಿಟ್ಟಿರುವ ಲಕ್ಷಾಂತರ ರೂ. ಮೌಲ್ಯದ ಹಲಗೆಗಳು ಗೆದ್ದಲು ಹಿಡಿದು ಹಾಳಾಗಿವೆ. ತಡೆಗೋಡೆ, ಪಿಲ್ಲರ್ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿವೆ. ಹೊಸ ಕಟ್ಟಕ್ಕೆ ಶಿಲಾನ್ಯಾಸ
ಅಡ್ಯತಕಂಡ ಕುಸಿದ ಅಣೆಕಟ್ಟಿನಿಂದ 1 ಕಿ.ಮೀ.ಮೇಲ್ಭಾಗದ ಚೆನ್ನಾವರ ಸೇತುವೆ ಬಳಿ ಹೊಸ ಅಣೆಕಟ್ಟು ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆ ಗುದ್ದಲಿಪೂಜೆ ಮಾಡಲಾಗಿತ್ತು. ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಾಣ ಆಗಲಿರುವ ಕಾಮಗಾರಿಗೆ ಶಾಸಕ ಅಂಗಾರ ಶಿಲಾನ್ಯಾಸ ನೆರವೇರಿಸಿದ್ದರು. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸ್ಥಳದಲ್ಲಿದ್ದ ಇಲಾಖೆ ಎಂಜಿನಿಯರ್ ಜನರಿಗೆ ಭರವಸೆ ನೀಡಿದ್ದರು. ಅದಾಗಿ ಈ ಬೇಸಗೆಗೆ ಎರಡು ವರ್ಷಗಳು ಆಗುತ್ತಿವೆ. ಕಾಮಗಾರಿ ಆರಂಭಗೊಳ್ಳುವ ಕಾಣುತ್ತಿಲ್ಲ.
Related Articles
Advertisement
40 ಕೋಟಿ ರೂ.!ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆಂದು ಜಲಾನಯನ ಇಲಾಖೆಗೆ 40 ಕೋಟಿ ರೂ. ಅನುದಾನ ಬಂದಿದೆ. ಈ ಬಗ್ಗೆ ನಮ್ಮಲ್ಲಿ ಅಂಕಿ ಅಂಶ ಇದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು. ಹಾಗಿದ್ದರೆ ಆ ಅನುದಾನ ಏನಾಯಿತು? ಯಾವುದಕ್ಕೆ ವಿನಿಯೋಗ ಆಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಶಿಲಾನ್ಯಾಸ ಹೆಸರಿನಲ್ಲಿ ದುರ್ಬಳಕೆ ಆಗುತ್ತಿದೆಯೇ ಎಂಬ ಸಂಶಯವು ಕಾಡಿದೆ. ಅಂತರ್ಜಲಕ್ಕೆ ಅಪಾಯ ಎಚ್ಚೆತ್ತುಕೊಳ್ಳದ ಇಲಾಖೆ
ಎಲ್ಲ ಸ್ತರದ ಪಂಚಾಯತ್ ಆಡಳಿತಗಳು ಅಂತರ್ಜಲದ ಸಂರಕ್ಷಣೆಗೆ ಕಿಂಡಿ ಅಣೆಕಟ್ಟಿಗೆ ಒತ್ತು ನೀಡಬೇಕು ಎಂಬ ಬಗ್ಗೆ ಅಭಿಯಾನ, ಜಾಗೃತಿ ಕಾರ್ಯಕ್ರಮ ನಡೆಸುತ್ತಿವೆ. ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಅನ್ನುವುದಕ್ಕೆ ಈ ಎರಡು ಅಣೆಕಟ್ಟುಗಳೇ ಸಾಕ್ಷಿ. ಉದ್ಯೋಗ ಖಾತರಿ ಯೋಜನೆ ಅಥವಾ ಇತರೆ ಅನುದಾನ ಬಳಸಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದಲ್ಲಿ, ದಲಿತರು ಸಹಿತ ನೂರಾರು ಕುಟುಂಬಗಳಿಗೆ ಕುಡಿಯಲು, ಕೃಷಿ ಭೂಮಿಗೆ ಮತ್ತು ಅಂತರ್ಜಲ ವೃದ್ಧಿಗೆ ಪೂರಕ ಆಗುತ್ತಿದ್ದರೂ ಸಂಬಂಧಪಟ್ಟವರು ಮನಸ್ಸು ಮಾಡುತ್ತಿಲ್ಲ. ತತ್ ಕ್ಷಣ ಕ್ರಮ
ಈ ಎರಡು ಕಿಂಡಿ ಅಣೆಕಟ್ಟುಗಳ ಕುರಿತಂತೆ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು, ತತ್‌ಕ್ಷಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಂತರ್ಜಲದ ಸಂರಕ್ಷಣೆ ದೃಷ್ಟಿಯಲ್ಲಿ ಈ ಬಾರಿ ಹೊಸದಾಗಿ ಅಣೆಕಟ್ಟು ನಿರ್ಮಾಣದ ಗುರಿ ಹೊಂದಲಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
– ಸೆಲ್ವಮಣಿ
ಸಿಇಒ, ಜಿ.ಪಂ., ಮಂಗಳೂರು ಕಿರಣ್ ಪ್ರಸಾದ್ ಕುಂಡಡ್ಕ