Advertisement

ಬಿಎಂಟಿಸಿಯಲ್ಲಿ ಫೋರ್ಜರಿ ಸಹಿ ಅಕ್ರಮ; ಹಿರಿಯ ಅಧಿಕಾರಿಗಳಿಂದಲೇ ಕೃತ್ಯ

11:48 AM Jan 28, 2023 | Team Udayavani |

ಬೆಂಗಳೂರು: ನಿರಂತರವಾಗಿ ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಕೋಟ್ಯಂತರ ನಷ್ಟ ಉಂಟು ಮಾಡುವ ಮತ್ತೂಂದು ಗೋಲ್‌ಮಾಲ್‌ ನಡೆದಿದ್ದು, ಜಾಹೀ ರಾತಿಗೆ ಸಂಬಂಧಿಸಿದ ಟೆಂಡರ್‌ ನವೀಕರಣ ಮತ್ತು ಅವಧಿ ವಿಸ್ತರಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳೇ ಸ್ವತಃ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕರ ಸಹಿ “ಫೋರ್ಜರಿ’ (ನಕಲು) ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಕೇವಲ ಒಂದೆರಡು ಕಡತಗಳಲ್ಲ; ಸಂಸ್ಥೆಯ ವಾಣಿಜ್ಯ ಶಾಖೆಯ ಸುಮಾರು 20ಕ್ಕೂ ಅಧಿಕ ಕಡತಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ಮತ್ತು ಭದ್ರತಾ ಹಾಗೂ ಜಾಗೃತ ದಳದ ನಿರ್ದೇಶಕರ ಸಹಿ ಫೋರ್ಜರಿ ಮಾಡಿ ಕೋಟ್ಯಂತರ ರೂಪಾಯಿ  ವಂಚಿಸಲಾಗಿದೆ. ಅದೂ ಕಳೆದ 2 ವರ್ಷಗಳಿಂದ ಈ “ಫೋರ್ಜರಿ’ ಅಡತಡೆ ಇಲ್ಲದೆ ಭರ್ಜರಿಯಾಗಿ ನಡೆದುಕೊಂಡು ಬಂದಿದ್ದು, ಈ ಅವಧಿಯಲ್ಲಿ ಹಿಂದಿನ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು ಸೇರಿ ಒಟ್ಟು ಮೂವರು ವ್ಯವಸ್ಥಾಪಕ ನಿರ್ದೇಶಕರ ಹಸ್ತಾಕ್ಷರ ನಕಲು ಮಾಡಿ ಹಲವು ಅನುಮತಿಗಳನ್ನು ನೀಡಿರುವುದು ಬಹಿರಂಗಗೊಂಡಿದೆ.

ಎಫ್ ಐಆರ್‌ ದಾಖಲು: ಈ “ಫೋರ್ಜರಿ’ ಪ್ರಕರಣದ ಪ್ರಮುಖ ರೂವಾರಿ ಬಿಎಂಟಿಸಿಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಆಗಿದ್ದ ಶ್ರೀರಾಮ್‌ ಮುಲ್ಕಾವಾನ್‌. ಗೋಲ್‌ ಮಾಲ್‌ನ ವಾಸನೆ ಬಡಿಯುತ್ತಿದ್ದಂತೆ ಈ ಅಧಿಕಾರಿಯನ್ನು ಕಲಬುರಗಿಗೆ ಈಚೆಗಷ್ಟೇ ವರ್ಗಾ ವಣೆ ಮಾಡಲಾಗಿತ್ತು. ಈಗ ಪ್ರಕರಣದ ತೀವ್ರತೆ ಮನಗಂಡು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಎಂಟಿಸಿಯು ಶ್ರೀರಾಮ್‌ ಮುಲ್ಕಾವಾನ್‌ ವಿರುದ್ಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದೆ.

ಕೋಟ್ಯಂತರ ರೂ.ನಷ್ಟ: ಬಸ್‌ಗಳ ಹಿಂದೆ ಜಾಹೀ ರಾತು ಅಳವಡಿಕೆ, ಟಿಟಿಎಂಸಿಗಳಲ್ಲಿ ವಾಹ ನಗಳ ನಿಲುಗಡೆ, ಮತ್ತಿತರ ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟ ವಾಣಿಜ್ಯ ಕಡತಗಳಲ್ಲಿ ಫೋರ್ಜರಿ ಸಹಿ/ ನಕಲು ಮಾಡಿ ಟೆಂಡರ್‌ ಪರವಾನಗಿ ನವೀಕರಿಸುವುದು ಅಥವಾ ಅವಧಿ ವಿಸ್ತರಿಸುವುದು ಎಗ್ಗಿಲ್ಲದೆ ವರ್ಷಗಳಿಂದ ನಡೆದಿದೆ. ಇದರಿಂದ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಶ್ರೀರಾಮ್‌ ಮುಲ್ಕಾವಾನ್‌ಗೆ ಇತರೆ ಅಧೀನ ಅಧಿಕಾರಿಗಳು ಕೂಡ ನೆರವಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಹಾಗಾಗಿ, ಒಟ್ಟಾರೆ ಐವರ ವಿರುದ್ಧ ಎಫ್ ಐಆರ್‌ ದಾಖಲಾಗಿತ್ತು. ಕೊನೆಕ್ಷಣದಲ್ಲಿ ಉಳಿದ ನಾಲ್ವರ ಹೆಸರನ್ನು ಕೈಬಿಡಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಶಿಸ್ತು ಕ್ರಮ: ಪ್ರಕರಣದ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ಅದಕ್ಕೆ ನೆರವಾದ ಅಧೀನ ಅಧಿಕಾರಿ/ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸಂಸ್ಥೆ ಮುಂದಾಗಿದ್ದು, ಈ ಬಗ್ಗೆ ವರದಿಯನ್ನೂ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದೂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು, ತನಿಖೆಗೆ ಹಸ್ತಕ್ಷೇಪವನ್ನೂ ಮಾಡದೆ ಕ್ರಮಕ್ಕೆ ಶಿಫಾರಸು ಮಾಡಿದ ವ್ಯವಸ್ಥಾಪಕ ನಿರ್ದೇಶಕರ ನಡೆ ಬಗ್ಗೆ ಈಗ ಬಿಎಂಟಿಸಿ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Advertisement

ಫೋರ್ಜರಿ/ ನಕಲು ಸ್ಯಾಂಪಲ್‌ ಗ‌ಳು

* ಬಸ್‌ ಹಿಂಭಾಗಗಳಲ್ಲಿ ಜಾಹೀರಾತು ಅಳವಡಿಸುವ ಗುತ್ತಿಗೆ ಪಡೆದ ಕಂಪನಿಯ ಟೆಂಡರ್‌ ಅವಧಿ ಮುಗಿದ ನಂತರವೂ ಎಂಡಿ ಫೋರ್ಜರಿ ಮಾಡಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡಲಾಗಿದೆ. ಒಂದು ಬಸ್‌ ಜಾಹೀರಾತು ಅಳವಡಿಕೆಗೆ 5 ಸಾವಿರ ರೂ. ಸುಮಾರು ಸಾವಿರ ಬಸ್‌ಗಳನ್ನು ಕಂಪನಿಯೊಂದು ಗುತ್ತಿಗೆ ಪಡೆದಿದೆ. ತಿಂಗಳಿಗೆ ಈ ಮೊತ್ತವೇ ಅಂದಾಜು 50 ಲಕ್ಷ ಆಗುತ್ತದೆ.

*ಶಾಂತಿನಗರ ಟಿಟಿಎಂಸಿಯಲ್ಲಿ ಪಾರ್ಕಿಂಗ್‌ ಟೆಂಡರ್‌ ಮುಗಿದಿದ್ದರೂ, ಅನುಮತಿ ಇಲ್ಲದೆ ತಾತ್ಕಾಲಿಕ ಟೆಂಡರ್‌ ವರ್ಷಗಟ್ಟಲೆ ಮುಂದುವರಿಸಲಾಯಿತು. ಆದರೆ, ಗುತ್ತಿಗೆ ಪಡೆದ ವ್ಯಕ್ತಿ ಸಂಸ್ಥೆಗೆ ಬಾಡಿಗೆಯನ್ನೂ ಪಾವತಿಸಿಲ್ಲ; ಜಾಗವನ್ನೂ ಹಸ್ತಾಂತರಿಸಲಿಲ್ಲ. ಭದ್ರತಾ ಠೇವಣಿ 32 ಲಕ್ಷ ರೂ. ಇದೆ. ಅದನ್ನು ಮೀರಿ ಬಾಡಿಗೆ ಮೊತ್ತ 68 ಲಕ್ಷ ರೂ. ಆಗಿದೆ. ಇದನ್ನು ವಸೂಲಿ ಮಾಡಲಿಲ್ಲ.

*ಪ್ರಮುಖ ನಿಲ್ದಾಣಗಳಲ್ಲಿ ಮಳಿಗೆಗಳ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ಪ್ರತಿ ವರ್ಷ ನವೀಕರಿಸಬೇಕು. ಒಮ್ಮೆಲೆ ಎರಡು-ಮೂರು ವರ್ಷ ನವೀಕರಿಸಲಾಗಿದೆ

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next